ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸಿದ ಮೇರು ಸಾಹಿತಿ ಕುವೆಂಪು

ಕಲಬುರಗಿ.ನ.05: ಪ್ರತಿಯೊಬ್ಬರಲ್ಲಿಯೂ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅರಿವು ಮೂಡುವಂತೆ ತಮ್ಮದೇ ಆದ ಅನೇಕ ಮೌಲ್ಯಯುತ ಸಾಹಿತ್ಯ ಕೃಷಿಯನ್ನು ಮಾಡಿದ ಕುವೆಂಪು ಅವರು, ಕನ್ನಡಿಗರ ಸ್ವಾಭಿಮಾನವನ್ನು ಬಡೆದೆಬ್ಬಿಸಿದ ಮಹಾಕವಿಯಾಗಿದ್ದಾರೆ. ಇವರು ಮಾನವೀಯ ಮೌಲ್ಯಗಳ ಮಹಾನ ಚೇತನವಾಗಿ ಕಂಡುಬರುತ್ತಾರೆಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ನಗರದ ಸ್ವಾಮಿ ವಿವೇಕಾನಂದ ನಗರದ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಕನ್ನಡ ತಿಂಗಳು-ಕನ್ನಡದ ಕಣ್ಮಣಿಗಳು’ ಸರಣಿ ಕಾರ್ಯಕ್ರಮ-4ರಲ್ಲಿ ‘ಕನ್ನಡ ನಾಡಿಗೆ ಕುವೆಂಪು ಕೊಡುಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೇವಲ ಕಲ್ಪನೆ ಆಧಾರಿತ ಸಾಹಿತ್ಯಕ್ಕೆ ಭವಿಷ್ಯವಿಲ್ಲ. ಬದಲಿಗೆ ನೈಜ, ಅನುಭವ, ವೈಚಾರಿಕತೆ, ಸತ್ವವುಳ್ಳ ಸಾಹಿತ್ಯ ಪ್ರಸ್ತುತ ಹೆಚ್ಚು ಅಗತ್ಯವಾಗಿದೆ. ಇಂತಹ ಸಾಹಿತ್ಯವನ್ನು ರಚಿಸಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾಗಿದ್ದಾರೆಂದು ನುಡಿದರು.
ಕಸಾಪ ಆಳಂದ ವಲಯ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಕುವೆಂಪು ಅವರು ಸಮೃದ್ಧ ಸಾಹಿತ್ಯವನ್ನು ರಚಿಸಿದ್ದಾರೆ.ಮಹಾಕಾವ್ಯ, ನಾಟಕ, ಬಿಡಿ ಕವನ ಸಂಕಲನ, ಕಥಾ ಸಂಕಲನ, ಆತ್ಮಕಥೆ, ವಿಮರ್ಶೆ, ಜೀವನಚರಿತ್ರೆ, ವೈಚಾರಿಕ ಲೇಖನ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ ಸಾಹಿತಿ ಇವರಾಗಿದ್ದಾರೆ. ಜಾತಿ, ಧರ್ಮ, ಮೌಢ್ಯತೆಯಂತಹ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ‘ವಿಶ್ವ ಭಾತೃತ್ವ’ವನ್ನು ಪ್ರತಿಪಾದಿಸಿದ್ದಾರೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವನಂದಯ್ಯ ಹಿರೇಮಠ, ಶಿವಶರಣಯ್ಯ ಹಿರೇಮಠ, ಸೋಮಶೇಖರ ಬಿ.ಮೂಲಗೆ, ಬಸವರಾಜ ಹೆಳವರ ಯಾಳಗಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾವ ಮಂಗಾಣೆ, ಎಸ್.ಎಸ್.ಪಾಟೀಲ ಬಡದಾಳ, ಅಣ್ಣಪ್ಪ ಪರಿಟ್ ನರೋಣಾ, ಸಚಿನ್ ಬಿದನೂರ, ಸಚಿನ್ ಸಾಹು, ಅಭಿಷೇಕ ಟಕ್ಕಳಕಿ ಸೇರಿದಂತೆ ಬಡಾವಣೆಯ ನಾಗರಿಕರು ಪಾಲ್ಗೊಂಡಿದ್ದರು.