ಕನ್ನಡಿಗರ ಸ್ವಾಭಿಮಾನದ ಹಬ್ಬ ಕರ್ನಾಟಕ ರಾಜ್ಯೋತ್ಸವ

ಸಂಜೆ ವಾಣಿ ವಾರ್ತೆ
ಕೊಟ್ಟೂರು ನ 30 : ಕರ್ನಾಟಕದ ನೆಲ-ಜಲ ಸಂಸ್ಕೃತಿಯ ಜೊತೆಗೆ ತನ್ನದೇ ಆದ ಅಧಿಕೃತ ಬಾವುಟ ಮತ್ತು ಭಾಷೆಯ ಉಳಿವಿಗಾಗಿ ಮಹಾನ್ ವ್ಯಕ್ತಿಗಳ ನಿರಂತರ ಹೋರಾಟದ ಪ್ರತಿಫಲವಾಗಿ ಕೋಟ್ಯಾಂತರ ಕನ್ನಡಿಗರ ಸ್ವಾಭಿಮಾನ ಸಂಕೇತದ ಹಬ್ಬವೇ ಕನ್ನಡ ರಾಜ್ಯೋತ್ಸವ ಎಂದು ರಾಂಪುರದ ಪ್ರಕಾಶ್ ಹೇಳಿದರು.
ಸೋಮವಾರ ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ತಾಯಿ ಭುವನೇಶ್ವರಿ ದೇವಿ ಮತ್ತು ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅತಿ ಸುಂದರವಾಗಿ ಸ್ಪಷ್ಟವಾಗಿ ಮಾತನಾಡಲು ಮತ್ತು ಬರೆಯುವ ಶಬ್ದಗಳನ್ನು ಅರ್ಥಮಾಡಿಕೊಳ್ಳಬಲ್ಲ ಏಕೈಕ ಭಾಷೆ ನಮ್ಮ ಕನ್ನಡ ಭಾಷೆ ಎಂದು ಹೇಳಿದರು.
ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಿ ಸಂಭ್ರಮದಿಂದ ಆಚರಿಸುತ್ತೇವೆ ಎಂದು ತಿಳಿಸಿದರು.
ಬಾಲಕಿ ನೃತ್ಯಕ್ಕೆ ಜನರಿಂದ ಮೆಚ್ಚುಗೆ
ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾದ ಆರ್. ಮಾನಸ ಯುವರತ್ನ ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಸುತ್ತಲೂ ನೆರೆದಿದ್ದ ಜನರು ಈ ಪುಟ್ಟ ಬಾಲಕಿಯ ಡ್ಯಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ: ಅಯ್ಯನಹಳ್ಳಿ ಮಂಜುನಾಥ್,  ಗಜಾಪುರದ ರಾಜು, ಪ್ರಸಾದ್, ಆಟೋ ಚಾಲಕರು ಮುಂತಾದ ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.