ಕನ್ನಡಿಗರ ರಕ್ಷಣೆ: ಜೈ ಶಂಕರ್‌ಗೆ ಖರ್ಗೆ ಪತ್ರ

ಬೆಂಗಳೂರು,ಫೆ.೨೩-ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಿಲುಕಿರುವ ಕಲಬುರಗಿಯ ಮೂವರು ಸೇರಿದಂತೆ ಎಲ್ಲ ಭಾರತೀಯರನ್ನು ರಕ್ಷಿಸುವಂತೆ ಕೋರಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ವರದಿ ಪ್ರಕಾರ ಕಳೆದ ಒಂದು ವರ್ಷದಿಂದ ಸುಮಾರು ೧೦೦ ಭಾರತೀಯರನ್ನು ರಷ್ಯಾದ ಸೈನಿಕರ ಸಹಾಯಕರಾಗಿ ನೇಮಕ ಮಾಡಲಾಗಿದೆ. ಕೆಲವರನ್ನು ಬಲವಂತವಾಗಿ ರಷ್ಯಾ ಉಕ್ರೇನ್ ಯುದ್ಧದಲ್ಲಿ ಬಳಸಲಾಗುತ್ತಿದೆ. ಇವರಲ್ಲಿ ಹಲವರ ಪಾಸ್ ಪೋರ್ಟ್ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇದೀಗ ಅವರು ರಷ್ಯಾದಲ್ಲಿ ಸಿಲುಕಿ, ಭಾರತಕ್ಕೆ ಮರಳದ ಪರಿಸ್ಥಿತಿ ಎದುರಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದು ಉದ್ಯೋಗದ ಹೆಸರಿನಲ್ಲಿ ವಂಚನೆಯಾಗಿದ್ದು, ತೆಲಂಗಾಣ, ಕರ್ನಾಟಕ, ಉತ್ತರ ಭಾರತದ ಹಲವೆಡೆ ಇಂತಹ ಪ್ರಕರಣಗಳು ನಡೆದಿದೆ ಎಂಬ ಮಾಹಿತಿ ಇದೆ ಎಂದು ಖರ್ಗೆ ಹೇಳಿದ್ದಾರೆ. ಮೋಸದಿಂದ ಯಾರನ್ನಾದರೂ ಯುದ್ಧಕ್ಕೆ ಕರೆದೊಯ್ಯುವುದು ತಪ್ಪು. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅವರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿಯ ಮೂವರು, ತೆಲಂಗಾಣ ವ್ಯಕ್ತಿಯನ್ನು ರಷ್ಯಾ ಸೈನಿಕರ ಸಹಾಯಕರಾಗಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿರುವುದು ಗಮನಕ್ಕೆ ಬಂದಿದೆ. ಆದರೆ, ಅವರನ್ನು ಬಲವಂತವಾಗಿ ಖಾಸಗಿ ಸೇನೆಯಲ್ಲಿ ಯುದ್ಧ ಮಾಡಲು ನಿಯೋಜಿಸಲಾಗಿದೆ. ಇದು ಅತ್ಯಂತ ಗಂಭೀರ ವಿಷಯ, ಕಡೆಗಣಿಸುವ ಹಾಗಿಲ್ಲ. ಈ ಯುವಕರ ಪ್ರಾಣ ಅಪಾಯದಲ್ಲಿದೆ. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸುವಂತೆ ಪತ್ರದ ಮುಖೇನ ಮನವಿ ಮಾಡಲಾಗಿದೆ. ರಷ್ಯಾದಲ್ಲಿ ಪ್ರಾಣಾಪಾಯದಲ್ಲಿರುವ ಯುವಕರನ್ನು ರಕ್ಷಿಸಿ ಭಾರತಕ್ಕೆ ಕರೆತರುವಲ್ಲಿ ನೀವು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಜೈ ಅವರಿಗೆ ಖರ್ಗೆ ಕೋರಿದ್ದಾರೆ.
ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡ ಯುವಕರ ಕುಟುಂಬಸ್ಥರು ಸದ್ಯ ಕಣ್ಣೀರಿಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಮರಳಿ ಬರಲು ಸಹಾಯ ಕೋರಿದ್ದಾರೆ.