ಕನ್ನಡಿಗರ ಮೇಲೆ ದಾಳಿ ದುಷ್ಕರ್ಮಿಗಳ ಶಿಕ್ಷಿಸಲು ಆಗ್ರಹ

ಬೆಂಗಳೂರು, ಜ. ೨- ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರ ನಡೆದಿರುವ ಘಟನೆಗಳ ಬಗ್ಗೆ ಅಸಮಾಧಾನ ಹೊರ ಹಾಕಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕನ್ನಡ ಧ್ವಜ ಹಾರಿಸಿದ ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳನ್ನು ನಡೆಸಿರುವವರಿಗೆ ತಕ್ಕಶಾಸ್ತಿ ಮಾಡಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಸಂದೇಶ ರವಾನಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿ ಪಾಲಿಕೆ ಎದುರು ಡಿ. ೨೮ ರಂದು ಕನ್ನಡ ಪರ ಹೋರಾಟಗಾರರು ನಾಡಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸ ಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಈ ಎಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಾಲಿಕೆ ಎದುರು ಧ್ವಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆಯೂ ನಡೆದು ಹೋಗಿದೆ. ಕರ್ನಾಟಕದಲ್ಲಿ ಕನ್ನಡ ಧ್ವಜಕ್ಕಾಗಿ ಹೋರಾಡಿದವರ ಮೇಲೆ ಪದೇ ಪದೇ ದಾಳಿ ನಡೆಯುತ್ತದೆ ಎಂದರೆ ಇವರಿಗೆ ರಕ್ಷಣೆ ನೀಡಲಾಗುತ್ತಿಲ್ಲ ಎಂದರ್ಥ. ಈ ವಿಚಾರದಲ್ಲಿ ಆಡಳಿತ ನಡೆಸುವವರ ಕನ್ನಡಾಭಿಮಾನ, ನಾಡಪ್ರೇಮ ಪ್ರಶ್ನಾರ್ಹವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರ ಭಾವೈಕ್ಯದ ಸಂಕೇತವಾಗಿರುವ ಕನ್ನಡ ಧ್ವಜವನ್ನು ಡಿ. ೩೧ ರೊಳಗಾಗಿ ತೆರವುಗೊಳಿಸಬೇಕು ಎಂದು ಹೇಳಿದಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.
ಕನ್ನಡಿಗರ ಮೇಲೆ, ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಎಚ್ಚರಿಕೆ ನೀಡುವ ಧೈರ್ಯ ತೋರುತ್ತಿರುವವರಿಗೆ ತಕ್ಕಶಾಸ್ತಿಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕನ್ನಡ ಧ್ವಜ ಸ್ಥಾಪನೆ ವಿಚಾರದಲ್ಲಿ ಉದ್ದಟತನ ತೋರಿರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಆ ಮೂಲಕ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಸಂದೇಶ ರವಾನಿಸಿ, ಇಲ್ಲವಾದರೆ ಕೈಲಾಗದವರೆಲ್ಲರೂ ಕನ್ನಡಿಗರ ಮೇಲೆ ಸವಾರಿ ಮಾಡಲು ಬಂದಾರು ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.