ಕನ್ನಡಿಗರ ಕಣ್ಮಣಿ ಡಾ. ಜಯದೇವಿತಾಯಿ ಲಿಗಾಡೆ

ಧಾರವಾಡ,ಜೂ23 : ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾಗಿದ್ದ ಡಾ. ಜಯದೇವಿತಾಯಿ ಲಿಗಾಡೆ ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಕನ್ನಡಿಗರ ಕಣ್ಮಣಿ ಎಂದು ಕ.ವಿ.ವ.ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಜಯದೇವಿ ತಾಯಿ ಲಿಗಾಡೆ ಅವರ 112 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಯದೇವಿತಾಯಿ ಲಿಗಾಡೆಯವರು ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಧೀಮಂತ ಮಹಿಳೆ. ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡದ ಗುಡಿಯನ್ನು ಕಟ್ಟಿದವರು. ಕನ್ನಡಿಗರಾದ ನಮಗೆ ಅವರ ಜೀವನಾದರ್ಶಗಳು ಚೇತೋಹಾರಿಯಾಗಿವೆ. ಅವರ ಸಾಮಾಜಿಕ ಕಾರ್ಯಗಳು ಅವಿಸ್ಮರಣೀಯ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಡಾ. ಜಯದೇವಿತಾಯಿ ಲಿಗಾಡೆಯವರು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ವೈಭವದ ಜೀವನವನ್ನು ನಡೆಸಲಿಲ್ಲ. ಗಾಂಧೀಜಿಯವರಿಂದ ಪ್ರಭಾವಿತರಾದ ಇವರು ತಮ್ಮ ಜೀವನದ ಕೊನೆಯವರೆಗೂ ನಿರಾಡಂಬರ ಜೀವನ ಸಾಗಿಸಿದರು.
ಹೈದ್ರಾಬಾದ ರಜಾಕಾರರ ಹಾವಳಿಯಿಂದ ಸಹಸ್ರಾರು ಜನರು ನಿರಾಶ್ರಿತರಾದಾಗ ಆಶ್ರಯ ಕೊಟ್ಟು ರಕ್ಷಿಸಿದ ಮಹಾ ತಾಯಿ ಜಯದೇವಿ ತಾಯಿಯವರು. ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಲು 200 ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಅಕ್ಷರದ ಅರಿವು ಮಾಡಿಕೊಟ್ಟರು. ಆ ಕಾಲದ ಅನೇಕ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ ಧೀಮಂತರ ಮಹಿಳೆ. ಅವರು ಕನ್ನಡ ಮಾತನಾಡುವ ಪ್ರದೇಶಗಳಾದ ಸೊಲ್ಲಾಪುರ, ಜತ್ತ, ಅಕ್ಕಲಕೋಟಗಳು ಕರ್ನಾಟಕಕ್ಕೆ ಸೇರಬೇಕೆಂದು ಬಲವಾದ ಪ್ರತಿಪಾದನೆ ಮಾಡಿದ್ದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಜಯದೇವಿ ತಾಯಿ ಲಿಗಾಡೆಯವರು ನಮಗೆಲ್ಲ ಪ್ರಾತಃಸ್ಮರಣೀಯರು. ಲಿಗಾಡೆಯವರಲ್ಲಿ ನಾಡು, ನುಡಿಯ ಅಭಿಮಾನ ಅಗಾಧವಾಗಿತ್ತು. ಕನ್ನಡದ ಏಳ್ಗೆಗಾಗಿ ಅವಿಶ್ರಾಂತವಾಗಿ ದುಡಿದ ಆದರ್ಶ ಮಹಿಳೆ ಎಂದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಜಯದೇವಿತಾಯಿ ಲಿಗಾಡೆಯವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಲಾಯಿತು.
ಸಹಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿ, ನಿರೂಪಿಸಿದರು. ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಧನವಂತ ಹಾಜವಗೋಳ ಹಾಗೂ ಸದಾನಂದ ಶಿವಳ್ಳಿ, ಸಂಘದ ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.