ಕನ್ನಡಿಗರು ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಬೇಕು

ಕೋಲಾರ, ನ. ೩- ಕನ್ನಡಿಗರು ಸಹಬಾಳ್ವೆಯ ಬದುಕನ್ನು ಕಟ್ಟಿಕೊಂಡು ಸರ್ವ ಜನಾಂಗದ ಶಾಂತಿಯ ತೋಟ ನಾವೆಲ್ಲರೂ ಶಾಂತಿ, ಸಹನೆ, ತಾಳ್ಮೆ, ಸಹೋದರತೆಯಲ್ಲಿ ಬದುಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು
ನಗರದ ಗಾಂಧಿವನದಲ್ಲಿ ಜಿಲ್ಲಾಡಳಿತ ಮತ್ತು ಭುವನೇಶ್ವರಿ ಕನ್ನಡ ಸಂಘದ ಸಂಘದ ವತಿಯಿಂದ ಭಾನುವಾರ ನಡೆದ ೬೫ ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತರೆ ಭಾಷೆ ಗಳಂತೆ ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಮತ್ತು ಸಾಹಿತ್ಯವನ್ನು ಹೊಂದಿದೆ. ಕರ್ನಾಟಕದಲ್ಲಿ ೮ ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಜಿಲ್ಲೆಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯವಾಗಿದೆ. ಕನ್ನಡ ಚರಿತ್ರೆಯಲ್ಲಿ ಗಂಗರು, ಕದಂಬರು, ಹೊಯ್ಸಳರು, ವಿಜಯನಗರದ ಅರಸರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು
ಕೊರೊನಾ ಇಡೀ ವಿಶ್ವವನ್ನು ಕಾಡುತ್ತಿದ್ದು, ಜಿಲ್ಲೆಗೂ ಅದರ ಬಿಸಿ ತಟ್ಟಿತ್ತು ನಮ್ಮ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹತೋಟಿಗೆ ತಂದು ಜನರ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ಜೊತೆಗೆ ಜನರ ಬದುಕನ್ನು ನಡೆಸಲು ಪ್ರತಿಯೊಬ್ಬರೂ ಕೈಜೋಡಿಸುತ್ತಾ ಇದ್ದಾರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೆ ಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಕೆರೆಗಳು ತುಂಬುತ್ತಿದ್ದು ರೈತರು ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು
ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ೬೫ ನೇ ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ಕ್ರಮ ವಹಿಸಿದ ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಯಿತು. ರಾಜಕೀಯ ಶಾಶ್ವತವಲ್ಲ ನಮ್ಮ ನಡೆ ನುಡಿ ಭಾಷೆ ಶಾಶ್ವತವಾಗಿದೆ ಕನ್ನಡ ರಾಜ್ಯೋತ್ಸವವು ನಮ್ಮ ಮನಸ್ಸಲ್ಲಿ ವಿಜೃಂಭಣೆಯಿಂದರಬೇಕು ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ ಕನ್ನಡ ಅನ್ನ ನೀಡುವ ಭಾಷೆಯಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನವರು ಉತ್ತರ ಭಾರತದವರಾಗಿದ್ದು ಇವರು ತಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಕನ್ನಡಿಗರು ತಮ್ಮ ಮಾತೃಭಾಷೆ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು. ಕನ್ನಡಿಗರು ಯಾವುದೇ ಕೆಲಸವನ್ನು ಮಾಡುವ ಮನೋಧೋರಣೆ ಬೆಳೆಸಿಕೊಳ್ಳಬೇಕು. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಆರ್ ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಉಪವಿಭಾಗಾಧಿಕಾರಿ ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ತಹಶೀಲ್ದಾರ್ ಶೋಭಿತ, ನಗರಸಭೆ ಆಯುಕ್ತ ಶ್ರೀಕಾಂತ್, ಕನ್ನಡ ಪರ ಸಂಘಟನೆಗಳ ಮುಖಂಡರಾದ ಕೆ.ಆರ್ ತ್ಯಾಗರಾಜ್, ಕಸಾಪ ಜಿಲ್ಲಾ ಅಧ್ಯಕ್ಷ ನಾಗನಂದ ಕೆಂಪರಾಜ್, ಜಯದೇವ್ ಪ್ರಸನ್ನ, ಕೃಷ್ಣೇಗೌಡ, ಸಾಹಿತಿ ಅರಿವು ಶಿವಪ್ಪ, ಮುಂತಾದವರು ಇದ್ದರು