ಕನ್ನಡಿಗರು ಶಾಂತಿ ಪ್ರಿಯರು

ಕುಣಿಗಲ್, ನ. ೨- ಕನ್ನಡ ನಾಡಿನ ಜನರು ಶಾಂತಿ ಪ್ರಿಯರು. ಅಭಿವೃದ್ಧಿಯ ಪ್ರಗತಿದಾರರು, ಸಾಹಿತಿಗಳು, ಸಂಸ್ಕೃತರು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ತ್ಯಾಗ ಜೀವಿಗಳು ಎಂದು ಶಾಸಕ ಡಾ. ರಂಗನಾಥ್ ಬಣ್ಣಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣದ ನಂತರ ಹಲವಾರು ಸಾಹಿತಿಗಳಾದ ಕುವೆಂಪು, ಆಲೂರು ವೆಂಕಟರಾಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ಕನ್ನಡ ಹೋರಾಟಗಾರರು, ಚಿತ್ರನಟರು ನಾಡಿನ ಘನತೆ ಕೀರ್ತಿಯನ್ನು ಹೆಚ್ಚಿಸಿದರು. ಕನ್ನಡ ನಾಡಿನಲ್ಲಿ ಜನಿಸಿರುವ ನಾವುಗಳು ಭಾಗ್ಯವಂತರಾಗಿದ್ದು, ಈ ನೆಲದ ಸಿದ್ಧಾಂತ ಬದುಕು ಉಸಿರು ಜೀವನದಲ್ಲಿ ಅಳವಡಿಸಿಕೊಂಡು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ನಿರ್ಮಿಸಲು ಯುವ ಜನಾಂಗ ಮುಂದಾಗಬೇಕು ಎಂದರು.
ಜಗತ್ತಿನಲ್ಲಿ ಹಲವಾರು ಮಾನವ ಕುಲದ ಮೇಲೆ ಜ್ವಲಂತ ಸಮಸ್ಯೆ ಇದ್ದರೂ ಸಹ ಕನ್ನಡಿಗರ ಶ್ರಮ, ತ್ಯಾಗ, ಬಲಿದಾನಗಳು ಮಾದರಿಯಾಗಿದ್ದು, ಇವುಗಳ ಶ್ರೇಷ್ಠತೆಯನ್ನು ಉಳಿಸುವಂತಹ ಕಾರ್ಯಗಳನ್ನು ಮಾಡಬೇಕಾಗಿದೆ. ತಾಲ್ಲೂಕಿನ ನೀರಾವರಿ ಯೋಜನೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ಕನ್ನಡ ನಾಡಿನ ಮಣ್ಣಿನಲ್ಲಿ ಜನಿಸಿರುವ ನಾವುಗಳು ಪುಣ್ಯವಂತರಾಗಿದ್ದು, ಈ ನಾಡಿನ ಸಂಸ್ಕೃತಿ, ಮೌಲ್ಯ, ಪ್ರತಿಭೆ, ಘನತೆ ಸಾಹಿತ್ಯಗಳ ಹಿರಿಮೆ ಕನ್ನಡಕ್ಕೆ ವರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ಜೋಸೆಫ್, ಸಿಪಿಐ ನಿರಂಜನ್‌ಕುಮಾರ್, ವೈದ್ಯಾಧಿಕಾರಿ ಡಾ. ಜಗದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಬಿಸಿಎಂ ಅಧಿಕಾರಿ ಪಾರ್ವತಮ್ಮ, ಬಿಇಓ ತಿಮ್ಮರಾಜು, ಸಿಓ ಜಗರೆಡ್ಡಿ, ಕಸಪಾ ಕೃಷ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.