ಕನ್ನಡಿಗರಿಲ್ಲದ ಕೇಂದ್ರ ಸಮಿತಿ: ಎಚ್ ಡಿಕೆ ಆಕ್ಷೇಪ

ಬೆಂಗಳೂರು,ಸೆ.16 -ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ 16 ಸದಸ್ಯರ ತಜ್ಞರ ಸಮಿತಿಯಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರು ಇಲ್ಲದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದ 12 ಸಾವಿರ ವರ್ಷಗಳ ಇತಿಹಾಸ ಪರಂಪರೆ ಅಧ್ಯಯನ ಮಾಡಲು ರಚಿಸಿರುವ ಸಮಿತಿಯಲ್ಲಿ ಕನ್ನಡಿಗರಾಗಲಿ ಅಥವಾ ಮಹಿಳೆಯರಾಗಲಿ ಇಲ್ಲವಾಗಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ

ಈ ಸಂಬಂದ ಟ್ವೀಟ್ ಮಾಡಿರುವ ಅವರು,
ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾದುವೆ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ? ಈ ದೇಶವನ್ನು ಅಂಬೆಗೆ ಹೋಲಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೆ ಸ್ಥಾನವೇ ಇಲ್ಲವಾಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಇತಿಹಾಸ, ಸಂಸ್ಕೃತಿ ವಿಚಾರವಾಗಿ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುವ,ಉತ್ತರ ಭಾರತೀಯರೇ ತುಂಬಿರುವ ಈ ಸಮಿತಿ ನಡೆಸುವ ಅಧ್ಯಯನದ ವಸ್ತುನಿಷ್ಠತೆ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಲಿ‌ ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಸಂಸ್ಕೃತಿ-ಪರಂಪರೆ, ಇತಿಹಾಸವನ್ನು ಕನ್ನಡದ ಪ್ರತಿನಿಧಿಗಳು ಇಲ್ಲದೆ ಹೇಗೆ ಅಧ್ಯಯನ ಮಾಡಲು ಸಾಧ್ಯ ಎಂದು ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿರುವ ಅವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.