ಕನ್ನಡಿಗರಲ್ಲಿ ಭಾಷಾಭಿಮಾನ ಬೆಳಸಬೇಕಿದೆ-ನಾರಾಯಣಸ್ವಾಮಿ

ವಿಜಯಪುರ.ನ೧೭: ರಾಜ್ಯದ ಪ್ರತಿ ಕನ್ನಡಿಗರಲ್ಲಿ ಭಾಷಾ ಸ್ವಾಭಿಮಾನವನ್ನು ಮರು ಹುಟ್ಟುಹಾಕಬೇಕಿದೆ. ಕನ್ನಡದ ಸ್ಥಿತಿಗತಿಯನ್ನು ಅರಿತು ಅವನತಿಯತ್ತ ಸಾಗುತ್ತಿರುವ ಭಾಷೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯು ಪ್ರತಿಯೊಬ್ಬನ ಮೇಲಿದೆ ಎಂದು ಭಟ್ರೇನಹಳ್ಳಿ ಶ್ರೀ ಸಾಯಿನಾಥ ಜ್ಞಾನ ಮಂದಿರದ ದೇವಾಲಯ ಸಮಿತಿಯ ಅಧ್ಯಕ್ಷ ಎಂ.ನಾರಾಯಣಸ್ವಾಮಿ ತಿಳಿಸಿದರು.
ಹೋಬಳಿಯ ಭಟ್ರೇನಹಳ್ಳಿಯ ಶ್ರೀ ಸಾಯಿನಾಥಜ್ಞಾನಮಂದಿರದಲ್ಲಿ ಕರ್ನಾಟಕ ವಚನಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡರಾಜ್ಯೋತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರಾಜ್ಯವನ್ನು ಆಳಿದ ರಾಜಮನೆತನಗಳು ಕಲೆ, ಸಂಸ್ಕೃತಿ, ಸಾಹಿತ್ಯದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿವೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಈ ನೆಲವು ಅನೇಕ ಸಿಡಿಲಮರಿಗಳಿಗೆ ಜನ್ಮನೀಡಿದೆ. ಭಾಷಾ ಸಮಸ್ಯೆ, ಗಡಿ ಸಮಸ್ಯೆ, ಮಾಧ್ಯಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಎಲ್ಲರಲ್ಲಿಯೂ ಅಖಂಡ ಕರ್ನಾಟಕದ ಭಾವನೆಯು ಮನೆಮಾಡಬೇಕು ಎಂದರು.
ವಕೀಲ ಕೆ.ಯೋಗಾನಂದ ಮಾತನಾಡಿ, ಕೇವಲ ಸರ್ಕಾರಗಳು ಮಾಡುವ ಕಾರ್ಯಕ್ರಮಗಳಿಗಿಂತ ಎಲ್ಲರಲ್ಲಿಯೂ ಕನ್ನಡಕ್ಕಾಗಿ ಕೆಲಸಮಾಡುವ ಆತುರತೆ ಬೆಳೆಯಬೇಕು. ಇಂದು ಮಾಧ್ಯಮಗಳು ಯುವಪೀಳಿಗೆಯನ್ನು ಹೆಚ್ಚು ಆಕರ್ಷಿಸುತ್ತಿರುವುದರಿಂದ ಕನ್ನಡಕಾರ್ಯಕ್ರಮಗಳು ಹೆಚ್ಚಬೇಕು. ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿಯೂ ಕನ್ನಡವನ್ನೇ ಪ್ರಮುಖಭಾಷೆಯನ್ನಾಗಿ ಕಲಿಸಬೇಕು. ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸುವಂತಾಗಬೇಕು ಎಂದರು.
ವಚನಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಟೇಲ್‌ನಾರಾಯಣಸ್ವಾಮಿ, ಸಾಯಿನಾಥಜ್ಞಾನಮಂದಿರ ದೇವಾಲಯ ಸಮಿತಿಯ ಸದಸ್ಯ ಕಂಪನಿದೇವರಾಜು, ಕನ್ನಡಮಂಜುನಾಥ್, ಶಿಕ್ಷಕ ಎಂ.ಕೆಂಪಣ್ಣ, ಸುಂದರಾಚಾರಿ, ಮತ್ತಿತರರು ಪಾಲ್ಗೊಂಡಿದ್ದರು.
ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಳೆದ ಸಾಳಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಎಂ.ಎಸ್.ಮಹಿಮಾ, ಟಿ.ಕೆ.ಜನನಿ, ಆರ್.ಅನುಷಾ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮಾಲತಿ, ದಾವೂದ್‌ಪಾಶಾ, ಮನೋರ್ಮಣಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಟೇಲ್‌ನಾರಾಯಣಸ್ವಾಮಿ, ಕವಿ ನಂಜಪ್ಪರೆಡ್ಡಿ, ಪ್ರಗತಿಪರ ಕೃಷಿಕ ಮುನಿನಂಜಪ್ಪ, ಹಿತ್ತಲಹಳ್ಳಿ ಎಚ್.ಕೆ.ಸುರೇಶ್, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಸಿರಿಧಾನ್ಯಮನೆ ಖ್ಯಾತಿಯ ಮಳ್ಳೂರು ನಾಗರಾಜು, ಕನ್ನಡಪರಿಚಾರಕ ಅಂಬಾರಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಉದಯೋನ್ಮುಖ ಕವಿಗಳಿಂದ ಸ್ವರಚಿತ ಕವನಗಳ ವಾಚನ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.