ಕನ್ನಡವೇ ರಾಷ್ಟ್ರಭಾಷೆ- ದರ್ಶನ್

ಬೆಂಗಳೂರು, ಸೆ.೧೬ : ಹಿಂದಿ ದಿವಸ್ ಆಚರಣೆ ಹಾಗೂ ಹಿಂದಿ ಹೇರಿಕೆ ವಿರೋಧಿಸಿ ಕಳೆದ ಮೂರು ದಿನಗಳಿಂದ ಆದೋಲನದ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕನ್ನಡದ ಮುಂಚೂಣಿಯ ನಟ ದರ್ಶನ್ ಕೂಡ ಇದರ ವಿರುದ್ಧ ದನಿ ಎತ್ತಿದ್ದಾರೆ.
ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ ಎಂದು ಅವರು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕನ್ನಡದ ಭಾಷೆ ಅಥವಾ ನೆಲದ ಮೇಲೆ ಯಾವುದೇ ಹೆರಿಕೆ ಸಲ್ಲುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ಹೇರಿಕೆಯ ಪ್ರಯತ್ನಗಳು ಬಹಳ ಕಾಲದಿಂದಲೂ ನಡೆಯುತ್ತಿವೆ. ಇದು ಈಗ ಮತ್ತಷ್ಟು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗರು ಎಚ್ಚೆತ್ತು ಪ್ರತಿಭಟಿಸಬೇಕಾಗಿದೆ. ಅಲ್ಲದಿದ್ದರೆ ಕನ್ನಡಿಗರ ಅಸ್ತಿತ್ವ ದೂರವಾಗುವ ದಿನಗಳು ಎದುರಾಗುತ್ತವೆ ಎಂದು ಚಾಲೆಂಜಿಂಗ್‌ಸ್ಟಾರ್ ದರ್ಶನ್ ತಿಳಿಸಿದ್ದಾರೆ.
ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಮಾಡುವುದು ಸರಿಯಾದ ಕ್ರಮವಲ್ಲ; ಉತ್ತರದ ಹಿಂದಿ ರಾಜ್ಯಗಳಲ್ಲಿ ಬೇಕಾದರೆ ಅದನ್ನು ಮಾಡಿಕೊಳ್ಳಲಿ; ವೈವಿಧ್ಯತೆಯಲ್ಲಿ ಏಕತೆ ಕಾಣುವುದು ನಮ್ಮ ಭಾರತದ ಸಂವಿಧಾನದ ಪ್ರತೀಕವಾಗಿದೆ. ನಮ್ಮ ಸಂಸ್ಕೃತಿ, ನೆಲದ ಮೇಲಿನ ಯಾವುದೇ ಹೇರಿಕೆಯನ್ನು ಸಹಿಸಲಾಗದು ಎಂದು ದರ್ಶನ್ ಖಡಕ್ ಉತ್ತರ ನೀಡಿದ್ದಾರೆ.
ನನ್ನ ಕೊನೆಯ ಉಸಿರು ಇರುವವರೆಗೂ ಕನ್ನಡಾಂಬೆಯ ಸೇವೆ ಮಾಡುವೆ; ಕನ್ನಡವೇ ನನ್ನ ಉಸಿರು. ಕನ್ನಡವೇ ಸತ್ಯ ಕನ್ನವೇ ನಿತ್ಯ ಎಂದು ದರ್ಶನ್ ಬರೆದುಕೊಂಡಿದ್ದಾರೆ.