
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.12: ಕನ್ನಡವೆಂದರೆ ಬರಿ ಭಾಷೆಯಲ್ಲ ಅದು ನಮ್ಮ ಬದುಕು. ಅದನ್ನು ಹೊಸ ತಲೆಮಾರಿನ ಹುಡುಗರು ಪಾಶ್ಚಾತ್ಯದ ಅರ್ಥವಾಗದ ಸಂಗೀತ ಮೋಹದಲ್ಲಿ ಮುಳುಗಿ ಕನ್ನಡವನ್ನು ಮರೆತಿರುವುದು ನೋವಿನ ಸಂಗತಿ. ಆದರೆ ನಾವು ಕನ್ನಡವನ್ನು ಬರೀ ತಾಯಿಯಂತೆ ಅಲ್ಲ ಅದಕ್ಕಿಂತ ಮಿಗಿಲಾಗಿ ಗ್ರಹಿಸಬೇಕಿದೆಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಹೇಳಿದರು.ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು. ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದಿ. ಕೆ.ವಿ. ತಿರುಪಾಲಪ್ಪ ಸ್ಮಾರಕ ದತ್ತಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು, ನಾಡಿನ ಪ್ರತಿಯೊಬ್ಬರು ಭಾಷೆಯ ಸಂದರ್ಭದಲ್ಲಿ ಎಲ್ಲರೂ ಒಂದಾಗಬೇಕೆಂದರು.ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪಿ.ಆರ್. ವೆಂಕಟೇಶ್, ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ವಿಷಯ ಕುರಿತು ಮಾತನಾಡುತ್ತಾ ಕುವೆಂಪು ವಿಚಾರವೆಂದರೆ ಅದು ಬರೀ ವೈಜ್ಞಾನಿಕ ವಿಷಯಕ್ಕೆ ಸಂಬಂದಿಸಿಲ್ಲ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳಿಗೂ ಅವರ ವೈಚಾರಿಕ ಪಕಳೆಗಳು ಹಬ್ಬಿವೆ. ಅದರಲ್ಲೂ ಕುವೆಂಪು ಅವರಿಗೆ ಕೃಷಿ ಮತ್ತು ರೈತರ ಕುರಿತು ಅಪಾರ ಕಾಳಜಿ ಹಾಗಾಗಿ ಕೃಷಿ ನೀತಿಗಳು ಬದಲಾದರೆ ರೈತನ ಗುಣಮಟ್ಟ ಸುಧಾರಣೆ ಆಗುತ್ತದೆಂದರು.ಪಾಲಿಕೆಯ ಸದಸ್ಯ ಪಿ.ಗಾದೆಪ್ಪ, ಲೇಖಕಿ ಎನ್.ಡಿ.ವೆಂಕಮ್ಮ ಹಾರೈಕೆ ನುಡಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಕೆ. ಮಂಜುನಾಥ ರೆಡ್ಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಮ್ಮ ಕಾಲೇಜು ಸದಾ ಪ್ರೋತ್ಸಾಹ ನೀಡುತ್ತದೆಂದರು.ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಸ್ವಾಗತ ಕೋರಿದರು.ಪ್ರಭಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರೆ, ಎ. ಎರ್ರಿಸ್ವಾಮಿ ವಂದಿಸಿದರು.