ಕನ್ನಡವನ್ನು ಪ್ರೀತಿಸಿ, ಅನ್ಯ ಭಾಷೆಯನ್ನು ಗೌರವಿಸಿ:ಮೇತ್ರೆ

ಭಾಲ್ಕಿ:ನ.2:ಕನ್ನಡ ನಮ್ಮ ಉಸಿರು, ಬದುಕಿನ ಹಸಿರು ಆಗಿದ್ದು, ಕನ್ನಡಿಗರೆಲ್ಲರೂ ನಿತ್ಯ ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸಬೇಕಾಗಿದೆ ಎಂದು ಶಿಕ್ಷಕ ಲಕ್ಷ್ಮಣ ಮೇತ್ರೆ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಂಡಿಸಿ ಮಾತನಾಡಿದರು.

ಕನ್ನಡ ಭಾಷೆಯ ಮೇಲಿನ ಪ್ರೀತಿ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಿದೆ. ಪ್ರತಿದಿನವೂ ಕರ್ನಾಟಕ ರಾಜ್ಯೋತ್ಸವ ಎಂಬಂತೆ ಮಾತೃಭಾಷೆಯ ಮೇಲಿನ ನೈಜ ಪ್ರೀತಿಯನ್ನು ತೋರಬೇಕಾಗಿದೆ ಎಂದು ಮಾರ್ಮಿಕ ಉದಾಹರಣೆ, ಪದ್ಯಗಳ ವಿವರಣೆ ಮೂಲಕ ತಿಳಿಸಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರಪಂಚದಲ್ಲಿಯೇ ವಿಶೇಷ ಮತ್ತು ವಿಶಿಷ್ಟ ಭಾಷೆಯಾಗಿರುವ ಕನ್ನಡವನ್ನು ವಿಶ್ವವ್ಯಾಪಿ ಆಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಶಶಿಕಲಾ ಪಾಟೀಲ ಮಾನ್ವಿ, ಆಡಳಿತಾಧಿಕಾರಿ ಮೋಹನರೆಡ್ಡಿ ಮಾತನಾಡಿದರು.

ಮುಖ್ಯಶಿಕ್ಷಕ ನಾಗರಾಜ ಮಠಪತಿ ಸ್ವಾಗತಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಕು.ಸಂಸ್ಕøತಿ ಸುರೇಶ ಚನ್ನಶೆಟ್ಟಿ ನಿರೂಪಿಸಿದರು.