
ದಾವಣಗೆರೆ.ಫೆ.೨೭: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನೂ ಪಡೆದುಕೊಂಡಿದೆ. ಆದರೆ ಭಾಷೆಯ ಅಭಿವೃದ್ಧಿಗೆ ಅಗತ್ಯವಿರುವಷ್ಟು ಹಣ ಕೇಂದ್ರದಿಂದ ಬಿಡುಗಡೆ ಆಗದಿರುವುದು ವಿಷಾದಕರ ಎಂದು ಸಮ್ಮೇಳನ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಹೇಳಿದರು.ದಾವಣಗೆರೆ ತಾಲ್ಲೂಕಿನ ಹೊಸ ಬೆಳವನೂರು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಕುರಿತು ಮೊನ್ನೆಯಷ್ಟೇ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ. ದೊಡ್ಡರಂಗೇಗೌಡರು ಧ್ವನಿ ಎತ್ತಿರುವುದು ಔಚಿತ್ಯ ಪೂರ್ಣವಾಗಿದೆ. ಪಕ್ಕದ ತಮಿಳು ಭಾಷೆ ಅಭಿವೃದ್ಧಿಗೆ ಭರಪೂರ ಹಣ ಬಿಡುಗಡೆ ಮಾಡುವ ಸರ್ಕಾರ ಕನ್ನಡಕ್ಕೇಕ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ಪ್ರಶ್ನಾರ್ಹ ಎಂದು ಹೇಳಿದರು.ಕನ್ನಡ ಭಾಷೆಯ ಏಳಿಗೆಗೆ ಸರ್ಕಾರಗಳು ಕೊಡುವ ಹಣದಿಂದ, ಸರ್ಕಾರಿ ಯೋಜನೆಗಳಿಂದ ಮಾತ್ರ ಸಾಧ್ಯ ಎಂದು ನಂಬಿದವಲ್ಲ ನಾನು. ಆದರೆ, ಭಾಷಾ ತಾರತಮ್ಯಗಳು ಎದ್ದು ಕಾಣುವಾಗ ಸುಮ್ಮನೆ ಕೂರುವುದು ಸರಿಯಲ್ಲ ಎಂದೇ ನನ್ನ ಭಾವನೆ ಎಂದರು.ರಾಜ್ಯದಲ್ಲಿ ಹಲವು ದಶಕಗಳಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ ನಿರ್ವಹಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ. ಹಲವಾರು ಆಕಾಡೆಮಿಗಳಿವೆ. ಕನ್ನಡದ ರಕ್ಷಣೆಗೆ ನೂರಾರು ರಕ್ಷಣಾ ವೇದಿಕೆಗಳಿವೆ. ಇಷ್ಟಾದರೂ ಕನ್ನಡದ ಬಳಕೆ ಶೇ. ನೂರರಷ್ಟು ಸಾಧ್ಯವಾಗಿದೆಯಾ, ಜನರು ಬಳಸುವ ಭಾಷೆಯಲ್ಲಿ ಶೇಕಡಾವಾರು ಎಷ್ಟು ಕನ್ನಡ ಉಳಿದುಕೊಂಡಿದೆ, ಈವರೆಗೆ ನಗರ ಪ್ರದೇಶಗಳಲ್ಲಿ ಮಾತ್ರ ಕನ್ನಡ ಕಲುಷಿತಗೊಂಡಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಹಳ್ಳಿಗಳಲ್ಲೂ ಇಂಗ್ಲೀಷ್ ಪ್ರಭಾವ ಸದ್ದಿಲ್ಲದೆ ನುಸುಳಿದೆ. ಇಂಗ್ಲೀಷ್ ಕಾನ್ವೆಂಟ್‌ಗಳು ಹಳ್ಳಿ ಹಳ್ಳಿಗಳಲ್ಲೂ ತಲೆ ಎತ್ತಿವೆ. ಹಾಗಂತ ಇಂಗ್ಲೀಷ್ ಕಲಿಯಲೇಬಾರದು ಎಂದೇನಿಲ್ಲ ಒಂದು ಭಾಷೆಯಾಗಿ ಖಂಡಿತ ಕಲಿಯೋಣ, ಆದರೆ ಕನ್ನಡದ ಆಸ್ತಿ, ಅಸ್ಮಿತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.ಇಷ್ಟಾಗಿಯೂ ಕನ್ನಡ ನಿಜವಾಗಿ ಉಳಿದಿರುವುದು ಹಳ್ಳಿಗಳಲ್ಲಿಯೇ, ನಮಗೆ ಅನ್ನ ಕೊಡುವ ರೈತರು ಕನ್ನಡವನ್ನು ಉಳಿಸಿ ಬೆಳೆಸುವ ನಿಜ ರಾಯಭಾರಿಗಳಾಗಿದ್ದಾರೆ. ಮುಂದೆ ಎಷ್ಟೇ ವರ್ಷಗಳಾಗಲಿ ನಮ್ಮ ರೈತರ ಗ್ರಾಮಜನ್ಯ ಕನ್ನಡವನ್ನು ಕಲುಷಿತಗೊಳಿಸುವುದು ಸುಲಭವಲ್ಲ, ಬೆಳೆಗಳು ಇರುವವರೆಗೆ ಕನ್ನಡಕ್ಕೆ ಖಂಡಿತ ಆಳವಿಲ್ಲ ಎಂದು ಹೇಳಿದರು.ಕನ್ನಡ ಭಾಷೆಯನ್ನು ಉಳಿಸಲು ಕನ್ನಡವನ್ನು ಹೆಚ್ಚೆಚ್ಚು ಮಾತನಾಡಬೇಕು, ಭಾಷೆಯನ್ನು ಬಳಸುತ್ತ ಹೋದಂತೆಲ್ಲ ಅದು ತಂತಾನೇ ಉಳಿಯುತ್ತ ಬೆಳೆಯುತ್ತ ಹೋಗುತ್ತದೆ, ಅಲ್ಪ ಸ್ವಲ್ಪ ರೂಪಾಂತರವಾದರೂ ನಿರಂತರ ಬಳಕೆಯಿಂದ ಕನ್ನಡಕ್ಕೊಂದು ಹೊಳಪು ಬರುತ್ತದೆ, ಜೀವಂತಿಕೆ ಬರುತ್ತದೆ. ಹೊರತಾಗಿ ಕನ್ನಡ ಭಾಷೆಗೆ ಅವನತಿ ಎಂಬುದಿಲ್ಲ, ಅನ್ಯ ಭಾಷಾ ಪದಗಳು ಕನ್ನಡದ ಪದಗಳಾಗೇ ಸೇರಿ ಹೋಗುವುದರಿಂದ ಭಾಷೆ ಇನ್ನಷ್ಟು ಸಮೃದ್ಧವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.ಇದರ ಹೊರತಾಗಿ ಸರ್ಕಾರಗಳೂ ಕನ್ನಡದ ಅಭಿವೃದ್ಧಿ ಬಗ್ಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಉನ್ನತ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚು ಮೀಸಲಾತಿ ಕೊಡಬೇಕಿದೆ. ಈಗಿರುವ ಮೀಸಲಾತಿ ಏನಕ್ಕೂ ಸಾಲದು, ಅದನ್ನು ಶೇ.50 ಕ್ಕೆ ಏರಿಸುವುದು ಒಳಿತು, ಐಟಿ; ಬಿಟಿ ಕಂಪೆನಿಗಳಲ್ಲೂ ಈ ಮೀಸಲಾತಿ ಜಾರಿಗೆ ತರುವುದು ಆಪೇಕ್ಷಣೀಯ ಎಂದರು.