
ಕಲಬುರಗಿ,ನ.8: ಕವಿ, ಕಾದಂಬರಿಕಾರ, ವಾಗ್ಮಿ, ವಿಮರ್ಶಕ, ಶಿಕ್ಷಣ ತಜ್ಞ, ಪ್ರಾಂಶುಪಾಲ, ಉಪ ಕುಲಪತಿ, ಸಾಂಸ್ಕøತಿಕ ರಾಯಭಾರಿ, ಕನ್ನಡಪರ ಚಳುವಳಿಗಾರರಾಗಿ ಹೀಗೆ ಹಲವು ವಿಧಗಳಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿ, ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಶ್ರಮಿಸಿದ ಡಾ.ವಿ.ಕೃ.ಗೋಕಾಕ್‍ರು ನಮ್ಮ ನಾಡಿನ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ ಎಂದು ಉಪನ್ಯಾಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಸಮೀಪದ ಉಪಳಾಂವನಲ್ಲಿರುವ ‘ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸರಣಿ ಕಾರ್ಯಕ್ರಮ-9ರಲ್ಲಿ ಬುಧವಾರ ಜರುಗಿದ ‘ಕನ್ನಡ ನಾಡು-ನುಡಿಗೆ ಡಾ.ವಿ.ಕೃ.ಗೋಕಾಕರ ಕೊಡುಗೆ’ ಎಂಬ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
ಡಾ.ವಿ.ಕೃ.ಗೋಕಾಕ ಅವರು ‘ವಿನಾಯಕ’ ಎಂಬ ಕಾವ್ಯನಾಮದಿಂದ ಇವರನ್ನು ಗುರುತಿಸಲಾಗುತ್ತದೆ. ಗೋಕಾಕರ ಸಾಹಿತ್ಯ ಕೃಷಿಗೆ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹ ದೊರೆತಿದೆ. ವಿವಿಧ ದೇಶಗಳಿಗೆ ಭಾರತದ ರಾಯಭಾರಿಯಾಗಿ ತೆರಳಿ ನಮ್ಮ ನಾಡು, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ ‘ನವ್ಯ’ತೆಗೆ ಬುನಾದಿ ಹಾಕಿದ್ದಾರೆ. ‘ಭಾರತ ಸಿಂಧು ರಶ್ಮಿ’, ‘ದ್ಯಾವಾ ಪ್ರಥ್ವಿ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಗೋಕಾಕರು, ನಾಡು, ನುಡಿ, ಜಲ, ಭಾಷೆಗಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಗೋಕಾಕರು ತಮ್ಮ ಪಾಂಡಿತ್ಯದಿಂದಾಗಿ ಜನಸಾಮಾನ್ಯರು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಲು ಪ್ರೇರಣೆ ನೀಡಿದ್ದಾರೆ ಎಂದರು.
ಕನ್ನಡದ ಸಾರ್ವಭೌಮತೆಯ ಬಗ್ಗೆ ವರದಿ ಹೊಂದಿದ್ದ ‘ಗೋಕಾಕ ವರದಿ’ ಜಾರಿಗಾಗಿ ನಮ್ಮ ನಾಡಿನಲ್ಲಿ ಜರುಗಿದ ಕನ್ನಡ ಚಳುವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಇಂತಹ ಬೃಹತ ಪ್ರಮಾಣದ ಚಳುವಳಿ ಹಿಂದೆಂದೂ ಜರಗಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲಿ, ಕರ್ನಾಟಕದ ಏಕೀಕರಣ ಚಳುವಳಿಯಾಗಲಿ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳಿರುವುದನ್ನು ಗಮನಿಸಿದರೆ ಕನ್ನಡಿಗರಿಗೆ ಗೋಕಾಕ್ ವರದಿಯೇ ಉಸಿರಾಗಿತ್ತು ಎಂದು ತಿಳಿದುಬರುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಸಂಸ್ಥಾಪಕ ಗೌಡೇಶ ಎಚ್.ಬಿರಾದಾರ, ಅಧ್ಯಕ್ಷೆ ಓಂದೇವಿ ಬಿರಾದಾರ, ಮುಖ್ಯ ಶಿಕ್ಷಕಿ ಜ್ಯೋತಿ ಪಾಟೀಲ, ಶಾಲೆಯ ಶಿಕ್ಷಕರಾದ ಶ್ವೇತಾ ಆರ್.ರೆಡ್ಡಿ, ಸಂಗೀತಾ ಪಿ.ಪಾಟೀಲ, ದೇವರಾಜ ಮಳ್ಳಿ, ಮೀನಾಕ್ಷಿ ಜಮಾದಾರ, ಶಿಲ್ಪಾ ಹೂಗಾರ, ಸುಶ್ಮೀತಾ ಕುಂಬಾರ, ಸುನಿತಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.