ಕನ್ನಡಪರ ಸಂಘಟನೆ ತಾಲೂಕು ಅಧ್ಯಕ್ಷನ ಬರ್ಬರ ಹತ್ಯೆ

ದಾವಣಗೆರೆ,ಜ.೮- ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ತಡರಾತ್ರಿ ನಡೆದಿದೆ.
ಗೌರಿಪುರ ಗ್ರಾಮದ ರಾಮಕೃಷ್ಣ (೩೦) ಮೃತಪಟ್ಟಿರುವ ಕನ್ನಡಪರ ಹೋರಾಟಗಾರನಾಗಿದ್ದಾನೆ.ಕೃತ್ಯ ನಡೆಸಿದ ಅರ್ಜುನ್ ಹಾಗೂ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಡಾಬಾದಲ್ಲಿ ಗಲಾಟೆ:
ಕೊಲೆಯಾದ ಜಗಳೂರಿನ ನಿವಾಸಿ ಹಾಗೂ ಕನ್ನಡ ಪರ ಹೋರಾಟಗಾರ ರಾಮಕೃಷ್ಣನನ್ನು ಆರೋಪಿಗಳಾದ ಅರ್ಜುನ್ ಮತ್ತು ಪ್ರಶಾಂತ್ ಪಾರ್ಟಿ ಮಾಡಲು ಹೊಸಕೆರೆ ಡಾಬಾಕ್ಕೆ ಕರೆಯಿಸಿಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಸ್ನೇಹಿತರ ನಡುವೆ ವಾಗ್ವಾದ ಉಂಟಾಗಿದೆ. ಆ ಬಳಿಕ ಗಲಾಟೆ ಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿಗಳು ಕಬ್ಬಿಣದ ರಾಡ್ ಹಾಗು ಕಲ್ಲುಗಳಿಂದ ಜಜ್ಜಿ ಡಾಬಾದಲ್ಲಿಯೇ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಲು ಆರೋಪಿಗಳು ಪೂರ್ವನಿಯೋಜಿತರಾಗಿಯೇ ಬಂದಿದ್ದರು ಎಂಬ ಶಂಕೆಯನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿವೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ:
ಇತ್ತೀಚೆಗೆ ಗ್ರಾಮ ಪಂಚಾಯತಿಯೊಂದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಮಕೃಷ್ಣ ಹೋರಾಟಕ್ಕಿಳಿದಿದ್ದರು. ಪಿಡಿಒ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣದಿಂದಲೇ ಅವರ ಕೊಲೆ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.