ತುರುವೇಕೆರೆ, ಸೆ. ೨೮- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆ. ೨೯ ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತುರುವೇಕೆರೆ ಪಟ್ಟಣದಲ್ಲೂ ಸಹ ರೈತಪರ ಸಂಘಟನೆಗಳಿಂದ ಬಂದ್ ಮಾಡಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ನಮ್ಮ ಹಕ್ಕು. ಪಕ್ಕದ ರಾಜ್ಯ ತಮಿಳುನಾಡು ನಮ್ಮ ರಾಜ್ಯದ ರೈತರನ್ನು ಕಡೆಗಣಿಸಿ, ನಮ್ಮ ನೀರನ್ನು ಅನಾವಶ್ಯಕವಾಗಿ ಪಡೆಯುತ್ತಿದೆ. ನಮ್ಮ ಸರ್ಕಾರಗಳು ಕೂಡಲೇ ಕಾವೇರಿ ನದಿ ನೀರನ್ನು ನಿಲ್ಲಿಸಬೇಕು. ನಮ್ಮ ತಾಲ್ಲೂಕಿಗೆ ಹರಿಯಬೇಕಾದ ಹೇಮಾವತಿ ನೀರನ್ನು ಕೂಡಲೇ ಹರಿಸಿ, ಕೆರೆ-ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ನಾಳೆ ಬೆಳಿಗ್ಗೆ ೬ ರಿಂದ ಸಂಜೆ ೬ ರ ವರೆಗೂ ಬಂದ್ ನಡೆಸಲಾಗವುದು. ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಬ್ಯಾಂಕ್, ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಸಂಚಾರ ಇರುವುದಿಲ್ಲ. ಈ ಬಂದ್‌ಗೆ ತಾಲ್ಲೂಕಿನ ಎಲ್ಲಾ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ತಾಲ್ಲೂಕು ಅಧ್ಯಕ್ಷ ಸುರೇಶ್, ದಂಡಿನಶಿವರ ಕುಮಾರ್, ಆಟೋ ಗಂಗಣ್ಣ, ಬೀದಿಬದಿ ವ್ಯಾಪಾರಿಗಳ ಸಂಘದ ಮಾರುತಿ, ರೈತ ಮುಖಂಡ ಗೋವಿಂದರಾಜು, ಗಿರಿಯಣ್ಣ, ವಸಂತ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.