ಕನ್ನಡಪರ ಸಂಘಟಕ ಹಾಗೂ ಹೋಟೆಲ್ ಉದ್ಯಮಿ  ಆರ್ ಕೆ ಶೆಟ್ಟಿ  ನಿಧನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 17 :- ತಾಲೂಕಿನ ಚಿರಪರಿಚಿತ ಉದ್ಯಮಿ ಹಾಗೂ ಕನ್ನಡಪರ ಸಂಘಟಕ ಮಂಗಳೂರು ಮೂಲದ ಆರ್ ಕೆ ಶೆಟ್ರು (77)ಇಂದು ಬೆಳಿಗ್ಗೆ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆಂದು ತಿಳಿದಿದೆ.
ಅವರು ಪತ್ನಿ ವಿನೋಧ ಮಕ್ಕಳಾದ  ಬಾಂಬೆಯಲ್ಲಿನ ಹೋಟೆಲಿನ ಉದ್ಯಮಿ ಯೋಗೀಶ್ ಮತ್ತು ಕೂಡ್ಲಿಗಿ ಹೋಟೆಲಿನ ಹಾಗೂ ಲಾಡ್ಜ್ ನ ಉದ್ಯಮಿ
ವಿನಾಯಕ ಇವರುಗಳನ್ನು ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ ಇಂದು ಸಂಜೆ ಕುಟುಂಬದವರ ತೀರ್ಮಾನದಂತೆ ಅಂತ್ಯಕ್ರಿಯೆ ನಡೆಸುತ್ತಾರೆಂದು ತಿಳಿದಿದೆ.
 ಮಂಗಳೂರಿನ ಮೂಲದವರಾದ ಇವರು ಸುಮಾರು ನಾಲ್ಕು ದಶಕದ ಹಿಂದೆಯೇ ಕೂಡ್ಲಿಗಿಯಲ್ಲಿನ ಬಸ್ ನಿಲ್ದಾಣದ ಕ್ಯಾಂಟೀನ್ ಹೋಟೆಲ್ ಉದ್ಯಮ ಪ್ರಾರಂಭಿಸುವ ಮೂಲಕ ಕೂಡ್ಲಿಗಿಯಲ್ಲಿಯೇ ಮತದಾರರ ಗುರುತಿನ ಚೀಟಿ ಮಾಡಿಸುವ ಮೂಲಕ ಸ್ಥಳೀಯರಾಗಿದ್ದಾರೆ ಅಲ್ಲದೆ ಕೂಡ್ಲಿಗಿಯಲ್ಲಿ ಕನ್ನಡ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡು ಕನ್ನಡ ಭವನ ನಿರ್ಮಾಣಕ್ಕೆ 30*40 ನಿವೇಶನ ನೀಡಿರುವ ಬಗ್ಗೆ ತಿಳಿದಿದೆ ಈಗ ಪಟ್ಟಣದಲ್ಲಿ ಶ್ರೀ ರೇಣುಕಾ ರೆಸ್ಟೋರೆಂಟ್ ಹಾಗೂ ಶ್ರೀ ಮೂಕಾಂಬಿಕಾ ಲಾಡ್ಜ್ ಸಹ ಇದೆ.
ಸರ್ಕಾರಿ ಶಾಲೆ ದತ್ತು ಪಡೆದಿದ್ದ ಶೆಟ್ರು : ಪಟ್ಟಣದ ಬಡ ಕೂಲಿ ಕಾರ್ಮಿಕ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಒಂದನೇ ವಾರ್ಡಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಪ್ರತಿವರ್ಷ ಅಲ್ಲಿನ ಮಕ್ಕಳಿಗೆ ಊಟದ ತಟ್ಟೆಗಳು, ನೋಟ್ ಪುಸ್ತಕ, ಪೆನ್ಸಿಲ್ ಹಾಗೂ ಇತರೆ ಅಭಿವೃದ್ಧಿ ಕಾರ್ಯದಲ್ಲೂ ಕೊಡುಗೈ ದಾನಿಯಾಗಿದ್ದ ಆರ್ ಕೆ ಶೆಟ್ರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದರು.
ಇತ್ತೀಚಿಗಷ್ಟೇ ಬೈಕ್ ಅಪಘಾತದಿಂದ ಆಸ್ಪತ್ರೆ ಸೇರಿ ಚೇತರಿಸಿಕೊಂಡಿದ್ದ ಶೆಟ್ರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದು ಕನ್ನಡಪರ ಸಂಘಟನೆಗೆ ತುಂಬಲಾರದ ನಷ್ಟವಾಗಿದೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಸೇರಿದಂತೆ  ಪಟ್ಟಣದ ಅನೇಕ ಕನ್ನಡಪರ ಸಂಘಟನೆಗಳು ಸಂತಾಪ ಸೂಚಿಸಿದ್ದಾರೆ.