ಕನ್ನಡನಾಡಿನಲ್ಲಿರುವವರೆಲ್ಲರೂ ಕನ್ನಡಿಗರೇ:ದೊಡ್ಡಬಸವನಗೌಡ

ಬಳ್ಳಾರಿ ನ.2, ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಬೇರೆ ಕಡೆಯಿಂದ ವಲಸೆ ಬಂದು ಇಲ್ಲಿನ ಸ್ವಾಭಾವಿಕ ನಿವಾಸಿಗಳಾಗಿರುವವರೆಲ್ಲರೂ ಕನ್ನಡಿಗರೇ ಎಂದು ವಿ.ಶ್ರೀ.ಕೃ.ವಿ.ವಿ.ದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಬಿ.ದೊಡ್ಡಬಸವನಗೌಡ ಹೇಳಿದರು.
ಅವರು ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಕನ್ನಡ ಭವನದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಲ್ಲಿರುವ ಪರಭಾಷಿಕರು, ಈ ನೆಲದ ಭಾಷೆಯನ್ನು ತಮ್ಮದೆಂದು ತಿಳಿದು ವ್ಯವಹರಿಸಬೇಕು. ಕನ್ನಡ ನಾಡಿನ ನೆಲ, ಜಲ, ತಮ್ಮದೆಂದು ಭಾವಿಸಿ ಜೀವಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಉಪಮೇಯರ್ ಬೆಣಕಲ್ ಬಸವರಾಜಗೌಡ ಮಾತನಾಡಿ, ಕನ್ನಡವು ವಿಶ್ವದ ಶ್ರೇಷ್ಠ ಭಾಷೆಯಾಗಿದೆ. ನಮ್ಮ ಕನ್ನಡಕ್ಕೆ ಭವ್ಯ ಸಂಸ್ಕøತಿ ಇದ್ದು, ಅದನ್ನು ಉಳಿಸಿಬೆಳೆಸಲು ನಾವೆಲ್ಲರೂ ಸಹ ಕಳಕಳಿಯಿಂದ ಕೆಲಸ ಮಾಡುವ ಸಂಕಲ್ಪ ಮಾಡಬೇಕಿದೆ ಎಂದರು.
ಹಿರಿಯ ರಂಗಕಲಾವಿದೆ ವೀಣಾ ಆದವಾನಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪದ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಮಾತನಾಡಿ ಇಂಗ್ಲಿಷ್ ಹಾಗೂ ಪರಭಾಷೆಗಳು ವಿಜೃಂಭಿಸುತ್ತಿವೆ. ನಮ್ಮ ಭಾಷೆ ಕಾಣೆಯಾಗುತ್ತಿವೆ. ಕನ್ನಡಿಗರ, ಕನ್ನಡ ಸಾಧಕರ, ನಾಡುನುಡಿ ಚಿಂತಕರ, ಹೆಸರುಗಳನ್ನು ಗಲ್ಲಿಗಲ್ಲಿಗೂ ನಾಮಕರಣ ಮಾಡುವ ಮೂಲಕ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಮೂಡಿಸಬೇಕಿದೆ ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಇತಿಹಾಸ ಸಂಶೋಧಕ ಡಾ.ಸಿ.ಎಂ.ವೀರಭದ್ರಪ್ಪ ಅವರು ಸಾಮರಸ್ಯದ ಬದುಕು ಕಟ್ಟಿಕೊಡುವ ಮಹೋನ್ನತ ಆಶಯ. ಕನ್ನಡ ಸಾಹಿತ್ಯದಲ್ಲಿ ಅರಳುಗಟ್ಟಿದೆ. ವಚನ, ದಾಸಸಾಹಿತ್ಯದಂತಹ ವಿಶ್ವಮಾನ್ಯ ಸಾಹಿತ್ಯ ಪ್ರಪಂಚದ ಯಾವುದೇ ಭಾಷೆಯಲ್ಲಿ ರಚನೆಯಾಗಿಲ್ಲ. ಕನ್ನಡ ಸಾಹಿತ್ಯವು ಅತ್ಯಂತ ಜನಪರ ಸಾಹಿತ್ಯವಾಗಿದ್ದು ಕನ್ನಡ ಸಂಸ್ಕøತಿಯು ವೈವಿಧ್ಯಮಯವಾಗಿದ್ದರೂ ವಿವಿಧತೆಯಲ್ಲಿ ಏಕತೆ ಇಲ್ಲಿನ ಸ್ಥಾಯಿಭಾವವಾಗಿದೆ. ಕನ್ನಡ ನಾಡಿನ ಅರಸರು ಅತ್ಯಂತ ಶೌರ್ಯ, ಪರಾಕ್ರಮಗಳಿಂದ ತಮ್ಮ ಸಾಮ್ರಾಜ್ಯವನ್ನು ದೇಶದಾದ್ಯಂತ ವಿಸ್ತರಿಸಿದ್ದರು. ಇಂತಹ ಚರಿತ್ರೆಯ ನೆರಳಿನಲ್ಲಿ ಕನ್ನಡವನ್ನು ಪುನರ್‍ಕಟ್ಟಬೇಕಾದ ಅವಶ್ಯಕತೆ ಇದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕೆ.ಸಣ್ಣಭೀಮಣ್ಣ ಬಂಡಿಹಟ್ಟಿ, ಡಾ.ಲಿಂಗರಾಜಮುದೇಗೌಡರು, ಸತೀಶ್‍ಕುಮಾರ್, ಎಂ.ಬಸವರಾಜ ಶ್ರೀಧರಗಡ್ಡೆ, ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ್, ಶ್ರೀಮತಿ ಲಕ್ಷ್ಮಿನರಸಮ್ಮ, ಡಾ.ಸಿ.ಎಂ.ವೀರಭದ್ರಯ್ಯ, ಕೋರಿಶಿವಪ್ರಕಾಶ್, ಕೆ.ಸಿ.ಸುರೇಶ್‍ಬಾಬು, ಸೊಂತಗಿರಿಧರ, ಪ್ರಕಾಶಹೆಮ್ಮಾಡಿ ಇವರನ್ನು ಸನ್ಮಾನಿಸಲಾಯಿತು.
ಕಸಾಪ ಗೌರವ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೋಳೂರು ಚಂದ್ರಶೇಖರಗೌಡ ಸ್ವಾಗತಿಸಿದರೆ, ವೀರೇಶ್ ಕರಡಕಲ್ ವಂದಿಸಿದರು.
ವೇದಿಕೆಯಲ್ಲಿ ಕರ್ನಾಟಕ ಯುವಕ ಸಂಘದ ಅಧ್ಯಕ್ಷ ವಿಭೂತಿ ಎರ್ರಿಸ್ವಾಮಿ, ಡಾ.ಬಿ.ಆರ್.ಮಂಜುನಾಥ ಇದ್ದರು. ಕಸಾಪ ಜಿಲ್ಲಾ ಉಪಾಧ್ಯಕ್ಷ ರಮೇಶ್‍ಗೌಡ ಪಾಟೀಲ್, ಕಸಾಪ ಬಳ್ಳಾರಿ ತಾಲ್ಲೂಕು ಅಧ್ಯಕ್ಷ ಕೆ.ಸುಂಕಪ್ಪ, ಸಿದ್ಮಲ್ ಮಂಜುನಾಥ, ಡಾ.ವೆಂಕಟಯ್ಯ ಅಪ್ಪಗೆರೆ, ಕೆ.ಜಗದೀಶ್, ರಾಮಚಂದ್ರ ವಡ್ಡೆ, ರಫೀಕ್ ಸಿಡಿಗಿನಮೊಳೆ, ನಿರಂಜನ ಶ್ರೀಧರಗಡ್ಡೆ, ಶಿವಶರಣ ಬಂಡಿಹಟ್ಟಿ, ಷಣ್ಮುಖಯ್ಯ ಸ್ವಾಮಿ, ಸಿ.ಎಂ.ಮಂಜುನಾಥ ಸುಮಾರೆಡ್ಡಿ, ಮಧುಮತಿ ಪಾಟೀಲ್ ಮೊದಲಾದವರು ಹಾಜರಿದ್ದರು.