ಕನ್ನಡದ ಶೇಕ್ಸ್‌ಪಿಯರ್ ಬೆಳ್ಳಾವೆ ನರಹರಿ ಶಾಸ್ತ್ರಿಗಳು:ಲಕ್ಷ್ಮಣದಾಸ್

ತುಮಕೂರು, ಜು. ೨೮- ಬೆಳ್ಳಾವೆ ನರಹರಿ ಶಾಸ್ತ್ರಿಗಳು ಕನ್ನಡದ ಶೇಕ್ಸ್‌ಪಿಯರ್ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಣದಾಸ್ ಹೇಳಿದರು.
ತಾಲ್ಲೂಕಿನ ಬೆಳ್ಳಾವಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದೊಂದಿಗೆ ಬೆಳ್ಳಾವಿ ಹೋಬಳಿ ಕಸಾಪ ಘಟಕದ ವತಿಯಿಂದ ಏರ್ಪಡಿಸಿದ್ದ ‘ಕನ್ನಡ ನಡೆ ಶಾಲಾ ಕಾಲೇಜು ಕಡೆ’ ಎಂಬ ಸಾಪ್ತಾಹಿಕ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಳ್ಳಾವೆ ನರಹರಿ ಶಾಸ್ತ್ರಿಗಳು ಒಬ್ಬ ಶಿಕ್ಷಕರಾಗಿ ತನಿಖಾಧಿಕಾರಿಗಳಾಗಿ ಸಂಸ್ಕೃತ ಮತ್ತು ಕನ್ನಡದ ಪ್ರಖಾಂಡ ಪಂಡಿತರಾಗಿ ಅಷ್ಟಾವದಾನಿಗಳಾಗಿ ನೂರಾರು ನಾಟಕಗಳನ್ನು ರಚಿಸಿ ೫೧ ನಾಟಕಗಳನ್ನು ಗುಬ್ಬಿ ಕಂಪನಿಗೆ ಬರೆದುಕೊಟ್ಟು ನಿರ್ದೇಶಕದ ಮೂಲಕ ಪ್ರದರ್ಶನಗೊಂಡಿವೆ. ಗುಬ್ಬಿ ವೀರಣ್ಣನವರ ಇವರ ನಾಟಕಗಳನ್ನು ಆಡಿಸುವುದರ ಮೂಲಕ ಅನೇಕ ಕಲಾಕಾರರಿಗೆ ಆಶ್ರಯ ನೀಡಿದವರು. ಡಾ. ರಾಜಕುಮಾರ್, ನರಸಿಂಹರಾಜು, ಶಕ್ತಿಪ್ರಸಾದ್, ಕಲ್ಯಾಣಕುಮಾರ್ ಅನೇಕ ಹಳೆಯ ಚಲನಚಿತ್ರ ಕಲಾವಿದರು ಗುಬ್ಬಿ ಕಂಪನಿಯಿಂದ ಬೆಳೆದು ಹೋದರು ಎಂದರು. ತಾಲ್ಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಮಾತನಾಡಿ, ಇದೆ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾವುಗಳು ಬೋಧನೆ ಕೇಳುವುದು ಓದುವುದರಲ್ಲಿ ಶ್ರದ್ಧೆ ಆಸಕ್ತಿ ಬೆಳಸಿಕೊಳ್ಳಬೇಕು. ಜ್ಞಾನ ಅಭ್ಯಾಸಗಳು ಸ್ವತ್ತಾಗುತ್ತದೆ. ಆದ್ದರಿಂದ ಮಾತೃ ಭಾಷೆಯಲ್ಲಿ ಪ್ರೀತಿ, ಅಭಿಮಾನ ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲರಾದ ಇಂದ್ರಾಣಮ್ಮ ಮಾತನಾಡಿ, ವಿದ್ಯಾರ್ಥಿಗಳು ಇಷ್ಟು ದೊಡ್ಡ ಇತಿಹಾಸವುಳ್ಳ ಬೆಳ್ಳಾವೆ ಚರಿತ್ರೆ ತಿಳಿದುಕೊಟ್ಟು ಕನ್ನಡ ಸಾಹಿತ್ಯ ಪರಿಷತ್ತಿನ ಹೆಜ್ಜೆ ಸ್ವಾಗತಾರ್ಹ. ಮಕ್ಕಳು ತಾವುಗಳು ಸಾಹಿತ್ಯ ಓದುವುದರಿಂದ ತಾವುಗಳು ಕಲ್ಪನೆಗಳ ಮೂಲಕ ಕಥೆ, ಕವನ ಪ್ರಬಂಧಗಳನ್ನು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹೋಬಳಿ ಕ.ಸಾ.ಪ ಎಸ್. ಮಹೇಶ್ ತೋಪಯ್ಯ, ವಿಜಯಕುಮಾರ್ ಮತ್ತಿತರರು ಉಪಸ್ಥಿತಿರಿದ್ದರು.
ಪ್ರೊ. ಶಶಿಕುಮಾರ್, ಜಾನಪದಗೀತೆ, ಕನ್ನಡಗೀತೆಗಳನ್ನು ಹಾಡಿದರು. ಹಾಸ್ಯಕವಿ ರಾಮರಾಜು ಹಾಸ್ಯ ಚಟಾಕಿ ನಡೆಸಿಕೊಟ್ಟರು. ಕನ್ನಡ ಶಿಕ್ಷಕ ಜಯಣ್ಣ ಕಾರ್ಯಕ್ರಮ ನಿರೂಪಿಸಿದರು.