ಕನ್ನಡದ ವೈಭವ ವಿಶ್ವಕ್ಕೆ ಮಾದರಿ : ದೇಶಮುಖ

(ಸಂಜೆವಾಣಿ ವಾರ್ತೆ)
ಔರಾದ :ಮೇ.9: ಕನ್ನಡ ಭಾಷೆ ನಮ್ಮ ನೈಸರ್ಗಿಕ ಸಂಪತ್ತು ಅದನ್ನು ನಮ್ಮ ಸಾಹಿತಿಗಳು, ಕಥೆ, ಕವನ ಕಾದಂಬರಿಗಳನ್ನು ಬರೆದು ಎಲ್ಲರಲ್ಲಿ ಕನ್ನಡದ ಅಭಿರುಚಿ ಬೆಳೆಸಿದ್ದಾರೆ, ಕನ್ನಡದ ವೈಭವ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಾಹಿತಿ ಜಗನ್ನಾಥ ದೇಶಮುಖ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಇಕ್ರಾ ಪಿಯು ಕಾಲೇಜಿನಲ್ಲಿ ನಡೆದ 109ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕತಿ ರಕ್ಷಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಸ್ಥಾಪನೆಯಾಯಿತು. ಕನ್ನಡ ನಾಡು, ನುಡಿ, ಜಲಕ್ಕೆ ಸಮಸ್ಯೆಯಾದಾಗ ಹೋರಾಡುವ ಸ್ವಾಭಿಮಾನದ ಸಂಸ್ಥೆಯಾಗಿದೆ ಎಂದರು. ಕನ್ನಡ ಸಾಹಿತ್ಯ ಪರ ಚಟುವಟಿಕೆ, ಸಮ್ಮೇಳನಗಳ ಮೂಲಕ ನಾಡು, ನುಡಿ ಜಾಗೃತಿ ಮೂಡಿಸುತ್ತ ಬಂದಿರುವ ಕಸಾಪ ಸಾಧನೆ ಶ್ಲಾಘನೀಯ. ಕನ್ನಡ ಅದು ಒಂದು ಭಾಷೆಯಲ್ಲ ಅದು ನಮ್ಮ ನೈಸರ್ಗಿಕ ಸಂಪತ್ತು ಅದನ್ನು ನಾವು ನಿತ್ಯ ಬಳಸುವ ಮೂಲಕ ಶ್ರೀಮಂತಗೊಳಿಸಬೇಕು ಎಂದರು.
109ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಬೀದರ ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಅವರು ಮಾತನಾಡಿ ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಸಂಸ್ಕøತಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಮಿರ್ಜಾ ಗಾಜಿ ಅಲಿ ಬೇಗ, ಜಿಲ್ಲಾ ಕಸಾಪ ಉಪಾಧ್ಯಕ್ಷ ಬಾಬುರಾವ ದಾನಾ, ಜಿಲ್ಲಾ ಕಸಾಪ ಖಜಾಂಚಿ ಶಿವಶಂಕರ ಟೋಕರೆ, ತಾಲೂಕು ಕಸಾಪ ಅಧ್ಯಕ್ಷ ಡಾ ಶಾಲಿವಾನ ಉದಗಿರೆ, ದಶರಥ ವಾಘಮಾರೆ, ಸಂಗ್ರಾಮ ಪವಾರ, ಅಮರಸ್ವಾಮಿ ಸ್ಥಾವರಮಠ, ಅಶೋಕ ಶೆಂಬೆಳ್ಳಿ, ಅಂಬಾದಾಸ ನೆಳಗೆ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.