ಮರೆಯಾದ ಕನ್ನಡದ ಮಾಣಿಕ್ಯ

ಬೆಂಗಳೂರು, ಏ. ೧೯- ಶತಾಯುಷಿ, ಶಬ್ಧಬ್ರಹ್ಮ ಕನ್ನಡದ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ವಯೋ ಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ೧.೧೫ಕ್ಕೆ ನಿಧನರಾಗಿದ್ದಾರೆ. ಅವರಿಗೆ ೧೦೮ ವರ್ಷ ವಯಸ್ಸಾಗಿತ್ತು.
ಒಂದು ವಾರದ ಹಿಂದೆಯಷ್ಟೇ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಶಾಂತಿ ಸರ್ಜಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ರಾತ್ರಿ ಅಸ್ವಸ್ಥಗೊಂಡು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಾಮರಾಜಪೇಟೆಯ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ೧೨.೩೦ಕ್ಕೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೇರವೇರಿತು. ಜಯನಗರದ ೭ನೇ ಬ್ಲಾಕ್‌ನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು.
ಪ್ರೊ. ಜಿ. ವೆಂಕಟಸುಬ್ಬಯ್ಯ ರವರು ಆಗಸ್ಟ್ ೧೩, ೧೯೧೩ರಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂಎ ಪದವಿ ಗಳಿಸಿದ ನಂತರ ಬಿಟಿ ಪದವಿ ಗಳಿಸಿದ್ದರು. ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟುವಿನ ಪ್ರಧಾನ ಸಂಪಾಕರಾಗಿಯೂ ಸೇವೆ ಸಲ್ಲಿಸಿದ್ದರು.
ನಡೆದಾಡುವ ನಿಘಂಟು, ಶಬ್ಧ ಬ್ರಹ್ಮನೆಂದೇ ಖ್ಯಾತಿಯಾಗಿದ್ದ ವೆಂಕಟಸುಬ್ಬಯ್ಯ ಸಾಹಿತ್ಯ ವಿಮರ್ಶೆ ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿ, ೭೦ ಪುಸ್ತಕಗಳನ್ನು ೧೪ ನಿಘಂಟುಗಳನ್ನು ಪ್ರಕಟಗೊಳಿಸಿದ್ದಾರೆ.
ವೆಂಕಟಸುಬ್ಬಯ್ಯನವರು ೨೦೧೧ರಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಕೆ.ಜಿ. ನಾಗರಾಜಪ್ಪ ಅವರ ಚಿಂತನಾಶೀಲ, ಬರಹ ಮಾಲಿಕೆಯಾದ ‘ಅನುಶ್ರೇಣಿ-ಯಜಮಾನಿಕೆ ವಿಮರ್ಶೆ’ ಕೃತಿ ಆಯ್ಕೆಯಾಗಿತ್ತು. ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕೇಂದ್ರಗಳಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಅವರಿಗೆ ಪದ್ಮಶ್ರೀ ಕರ್ನಾಟಕ ಸಾಹಿತ್ಯ ಅಕಾಡೆಮಿ, ಪ್ರತಿಷ್ಠಿತ ರಾಜ್ಯೋತ್ಸವ, ಪಂಪ, ನಾಡೋಜ, ಆರ್ಯಭಟ, ಗೊರೂರು, ಅನಕೃ ಪ್ರಶಸ್ತಿ ಸೇರಿದಂತೆ ಇನ್ನಿತರ ಗೌರವಗಳಿಗೆ ಭಾಜನರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ದಕ್ಷಿಣ ಭಾರತ ವಿಭಾಗಕ್ಕೆ ನೀಡಲಾಗುವ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದಿದ್ದರು.
ಸಿಎಂ ಸಂತಾಪ
ಹೆಸರಾಂತ ಭಾಷಾ ತಜ್ಞ, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಿಘಂಟು ರಚನೆ ಕನ್ನಡ ಭಾಷೆ ಸಾಹಿತ್ಯ ಬೆಳವಣೆಗೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಅಪೂರ್ವ ರತ್ನವೊಂದು ಮರೆಯಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವೆಂಕಟಸುಬ್ಬಯ್ಯ ನಿಧನಕ್ಕೆ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ ಸೇರಿದಂತೆ ಮಂತ್ರಿಮಂಡಲದ ಸಹದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತೀವ್ರ ಸಂತಾಪ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್ ಸ್ವಾಮಿ ಕಂಬನಿ ಮಿಡಿದ್ದಿದ್ದು, ನಾಡು-ನುಡಿ ಶ್ರೇಷ್ಠ ವಿದ್ವಾಂಸಕನನ್ನು ರಾಜ್ಯ ಕಳೆದುಕೊಂಡಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಅವರಿಗೆ ಸಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.ಮ