ಕನ್ನಡದ ದಿಗ್ಗಜರುಗಳಿಗೆ ಸನ್ಮಾನ

ಮೈಸೂರು,ನ.7: ಕನ್ನಡ ಭಾಷೆಯ ದ್ರಾವಿಡ ಮೂಲದ ಭಾಷೆ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರಿನ ಸಂಧ್ಯಾ ಸುರಕ್ಷಾ ಟ್ರಸ್ಟ್ (ರಿ) ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡ ದಿಗ್ಗಜರುಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿüಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಅನೇಕ ಮಹನೀಯರು ಹೋರಾಟ ನಡೆಸಿದ ಫಲವಾಗಿ ಇಂದು ಕನ್ನಡ ಭಾಷೆಯು ಅತ್ಯಂತ ಜನಪ್ರಿಯವಾಗಿದ್ದು, ವಿಶೇಷ ಸ್ಥಾನಮಾನಗಳು ಲಭಿಸಿವೆ. ಕನ್ನಡಿಗರಾದ ನಾವು ದೇಶದ ಇತರ ಎಲ್ಲಾ ರಾಜ್ಯದವರೊಂದಿಗೂ ವಿಶಿಷ್ಟ ಸಂಬಂಧ ಹೊಂದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾಗಿ ಕನ್ನಡ ಭಾಷೆ ರಾಷ್ಟ್ರಾದ್ಯಂತ ಚಾಲ್ತಿಯಲ್ಲಿದೆ. ಇದನ್ನು ಇಂದಿಗೂ ಉಳಿಸಿ-ಬೆಳೆಸುವ ದಿಸೆಯಲ್ಲಿ ಅನೇಕ ಸಾಹಿತಿಗಳು, ಕವಿಗಳು ಹಾಗೂ ಕನ್ನಡ ಭಾಷೆಯ ಅಭಿಮಾನಿಗಳು ಹೋರಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನು ಗಮನಿಸಿದ ಸಂಧ್ಯಾ ಸುರಕ್ಷಾ ಟ್ರಸ್ಟ್ ಈ ದಿಸೆಯಲ್ಲಿ ಕಾರ್ಯೋನ್ಮುಖರಾದವರಿಗೆ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಹಾಗೂ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಕನ್ನಡ ದಿಗ್ಗಜರುಗಳನ್ನು ಇಂದು ಸನ್ಮಾನಿಸುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಸನ್ಮಾನಿಸುವ ಕಾರ್ಯಕ್ರಮದಂತೆಯೇ ಇದು ನನಗೆ ವ್ಯಕ್ತವಾಗುತ್ತದೆ. ಇಂತಹ ಉತ್ತಮ ಕಾರ್ಯ ಮಾಡುತ್ತಿರುವ ಸುರಕ್ಷಾ ಟ್ರಸ್ಟಿನ ಕಾರ್ಯವೈಖರಿ ಶ್ಲಾಘನೀಯ ಎಂದರು.
ಸಮಾರಂಭ ಕುರಿತು ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್, ಪ್ರೊ.ಕೆ.ಭೈರವಮೂರ್ತಿ ಹಾಗೂ ಇನ್ನಿತರರು ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಶ್ರೀವತ್ಸ ಹಾಗೂ ಇನ್ನಿತರರು ಇದ್ದರು.
ಇಂದಿನ ಸಮಾರಂಭದಲ್ಲಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ನಾಡೋಜ ಡಾ.ಮಹೇಶ್ ಜೋಶಿ, ಹಿರಿಯ ಸಾಹಿತಿ ಸಿಪಿಕೆ., ಪ್ರೊ.ಕೆ.ಭೈರವಮೂರ್ತಿ, ಮೈಕ್ ಚಂದ್ರು, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹಾಗೂ ಇನ್ನಿತರರನ್ನು ಟ್ರಸ್ಟ್‍ನ ವತಿಯಿಂದ ಸನ್ಮಾನಿಸಿದರು.
ಸಂಧ್ಯಾ ಸುರಕ್ಷಾ ಟ್ರಸ್ಟ್ ನ ಟ್ರಸ್ಟಿ ಡಾ.ಬಿ.ಆರ್.ನಟರಾಜ ಜೋಯೀಸ್ ಸಮಾರಂಭದ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.