ಕನ್ನಡದ ಜ್ಞಾನ ಸಂಪತ್ತು ವಿಶ್ವಕ್ಕೆ ಪಸರಿಸಲು ಡಿಜಿಟಲೀಕರಣ ಅಗತ್ಯ: ಓಂ ಶಿವ ಪ್ರಕಾಶ್ ಎಚ್.ಎಲ್

ಸಂಜೆವಾಣಿ ವಾರ್ತೆ
ಹೊಸಪೇಟೆ ಜು4: ಇತ್ತೀಚಿನ ತಂತ್ರಜ್ಞಾನ ಪರಿಣಾಮದಿಂದ ಜನಸಾಮಾನ್ಯರ ಅಭಿರುಚಿ ಬದಲಾಗುತ್ತಿರುವ ಸಂದರ್ಭದಲ್ಲಿ ಕನ್ನಡದ ಜ್ಞಾನ ಸಂಪತ್ತು ವಿಶ್ವಕ್ಕೆ ಪಸರಿಸಲು ಡಿಜಿಟಲ್ ತಂತ್ರಜ್ಞಾನ ಅವಶ್ಯಕವಾಗಿದೆಂದು ಬೆಂಗಳೂರಿನ ಸಂಚಿ ಫೌಂಡೇಶನ್ ಸಂಸ್ಥಾಪಕರಾದ ಓಂಶಿವಪ್ರಕಾಶ್. ಎಚ್. ಎಲ್ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದ ಡಾ.ರಾಜಕುಮಾರ್ ಸಭಾಂಗಣದಲ್ಲಿ ಸೋಮವಾರ ಪ್ರಸಾರಾಂಗ ಹಮ್ಮಿಕೊಂಡ ಕನ್ನಡ ಸಾಹಿತ್ಯ ಮತ್ತು ಡಿಜಿಟಲೀಕರಣ: ಇಂದು ಮತ್ತು ನಾಳೆ ವಿಷಯದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಜಿಟಲೀಕರಣದ ಮೂಲಕ ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯವನ್ನು ಸಂಚಯ ಮಾಡುತ್ತಿದ್ದು, ಕನ್ನಡದಲ್ಲಿ ಬೇಕಿರುವ ಅನೇಕ ವಿಷಯಗಳನ್ನು ಕಟ್ಟಿಕೊಡುವ ಕೆಲಸದಲ್ಲಿ ನಮ್ಮ ಫೌಂಡೇಶನ್ ನಿರತವಾಗಿದೆ. ಇನ್ನೂ ಅಂತಾರಾಷ್ಟ್ರೀಯ ಮಟ್ಟದ ಲೇಖನಗಳನ್ನು ಜನರಿಗೆ ಬಹುಕಾಲಗಳವರೆಗೆ ತಲುಪಿಸುವುದರೊಂದಿಗೆ ವಚನ ಸಾಹಿತ್ಯವನ್ನು ಏಕೆ ಡಿಜಿಟಲಿಕರಣ ಮಾಡಬಾರದು ಎಂಬ ಪ್ರಶ್ನೆ ಉದ್ಭವಿಸಿದಾಗ, ವಚನ ಸಂಚಯ ಆರಂಭಿಸಲಾಯಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕಿ ಡಾ. ಶೈಲಜ ಇಂ. ಹಿರೇಮಠ ಅವರು ಸ್ಥಳೀಯರ ಬರಹಗಳನ್ನು ವಿದೇಶಿಯರಿಗೆ, ವಿದೇಶಿಯರ ಬರಹಗಳನ್ನು ಸ್ಥಳೀಯರಿಗೆ ತಲುಪಿಸುವಂತೆ ಮಾಡುವಲ್ಲಿ ಡಿಜಿಟಲೀಕರಣ ದೊಡ್ಡ ಪಾತ್ರವಹಿಸಿದೆ ಎಂದರು.  ಇಂತಹ ಪ್ರಚಾರೋಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯವು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ  ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ ಬದಲಾದ ತಂತ್ರಜ್ಞಾನ ಯುಗದಿಂದ ಇಂದು ಸಾವಿರಾರು ಪುಸ್ತಕಗಳು ನಮ್ಮ ಮೊಬೈಲ್ ಫೋನ್‍ಗಳಲ್ಲಿ ಲಭ್ಯವಿದ್ದು, ಅವುಗಳನ್ನು ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಇನ್ನೂ ಹೆಸರಾಂತ ಲೇಖಕರುಗಳ ಪುಸ್ತಕಗಳು ಬಿಡುಗಡೆಯಾದ ಮಾರನೇ ದಿನವೇ ಬೀದಿ ಬದಿಗಳಲ್ಲಿ ಲಭ್ಯವಾಗುವಂತಹ ಸ್ಥಿತಿ ನಿರ್ಮಾಣವಾಗಿದ್ದು, ನಕಲು ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿಂದೆ ಪುರಾತತ್ವ ಇಲಾಖೆಯವರಿಗೆ ಸಿಕ್ಕಂತಹ ಅನೇಕ ವಸ್ತುಗಳನ್ನು ಅವರ ಶ್ರಮಕ್ಕೆ ಕೃತಜ್ಞತೆ ಇಲ್ಲದೆ ಬಳಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಮುಂದಿನ ದಿನಗಳಲ್ಲಿ ನಾಡಿನ ಹೆಸರಾಂತ ಕವಿಗಳು ಹಾಗೂ ಸಾಹಿತ್ಯಗಳ ಭಾವಚಿತ್ರದಲ್ಲಿ ಅವರ ಸಹಿ ಮಾದರಿ ಇರುವ ಛಾಯಾಚಿತ್ರಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು. 
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಸಾರಾಂಗದ ಉಪನಿರ್ದೇಶಕರಾದ ಹೆಚ್.ಬಿ. ರವೀಂದ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಸಾರಾಂಗದ ಪ್ರಕಟಣಾ ಸಹಾಯಕ ಡಾ.ಎಸ್ ಮೋಹನ್ ಅವರು ವಂದಿಸಿದರು.

One attachment • Scanned by Gmail