ಕನ್ನಡದ ಕಟ್ಟಾಳು, ಸಮಾನತೆಯ ಶ್ರೇಷ್ಠಮಾನವ ಪ್ರಶಸ್ತಿ ಪುರಸ್ಕೃತ

ಹಾಜಿಬಾಬಾ ಕರಡಕಲ್ ಕಲ್ಯಾಣ ಕರ್ನಾಟಕ ರತ್ನ, ಶಿವಲಿಂಗ ಮೇಗಳಮನಿಗೆ ರಾಜ್ಯೋತ್ಸವ ಪ್ರಶಸ್ತಿ
ಲಿಂಗಸುಗೂರು.ನ.೪-ಸಮಾಜ ಸೇವೆಯಲ್ಲೇ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿರುವ ಕನ್ನಡಾಭಿಮಾನಿ ಮಹ್ಮದ್ ಹಾಜಿಬಾಬಾ ಕರಡಕಲ್ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಕೊಡಮಾಡುವ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಯೂನಿಯನ್‌ನ ಸಿರವಾರ ಘಟಕದ ವತಿಯಿಂದ ಸಿರವಾರ ಪಟ್ಟಣದಲ್ಲಿ ನವೆಂಬರ್ ೮ನೇ ತಾರೀಖಿನಂದು ಸಂಜೆ ೬ ಗಂಟೆಯಿಂದ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ಕನ್ನಡಮ್ಮನಿಗೆ ನುಡಿ ನಮನ ಸಮಾರಂಭದಲ್ಲಿ ಹಾಜಿಬಾಬಾರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ, ಸ್ಥಳೀಯ ಪುರಸಭೆಯ ಆಡಳಿತಾಧಿಕಾರಿ ಶಿವಲಿಂಗ ಮೇಗಳಮನಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ಶರಣಪ್ಪ ಗುರುಗುಂಟ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಿರವಾರ ಪಟ್ಟಣದ ಸರಕಾರಿ ಕಾಲೇಜು ಆವರಣದಲ್ಲಿ ನಡೆಯಲಿರುವ ಈ ಸಮಾರಂಭದ ಸಾನಿಧ್ಯವನ್ನು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಯೂನಿಯನ್ ರಾಜ್ಯಾಧ್ಯಕ್ಷ ಬಿ.ನಾರಾಯಣ ಸಮಾರಂಭದ ಅದ್ಯಕ್ಷತೆ ವಹಿಸಲಿದ್ದಾರೆ. ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ. ಸಿರವಾರ ತಾಲೂಕು ಪಂಚಾಯತ್ ಅದ್ಯಕ್ಷ ದೇವರಾಜ ನಾಯಕ, ಯೂನಿಯನ್ ಜಿಲ್ಲಾದ್ಯಕ್ಷ ಮಾರುತಿ ಬಡಿಗೇರ್, ಮಾಜಿ ಜಿ.ಪಂ. ಸದಸ್ಯ ಅಸ್ಲಂಪಾಷಾ, ಪಿಎಸೈ ಸುಜಾತ ನಾಯಕ, ಪಿಎಸೈ ವೆಂಕಟೇಶ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.