ಕನ್ನಡದ ಆದ್ಯತೆಗೆ ಆಗ್ರಹ:ಲೀಡ್‍ಬ್ಯಾಂಕ್ ಎದುರು ಪ್ರಾಧಿಕಾರದ ಮೌನ ಪ್ರತಿಭಟನೆ

ಕಲಬುರಗಿ.ಡಿ.29: ರಾಜ್ಯದ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುವ ವ್ಯವಹಾರಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಇಂದು ಕಲಬುರಗಿಯ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಲೀಡ್ ಬ್ಯಾಂಕ್ ಎದುರುಗಡೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಜಾಗೃತಿ ಸಮಿತಿ ಸದಸ್ಯರು ಮೌನ ಪ್ರತಿಭಟನಾ ಧರಣಿ ನಡೆಸಿದರು.
ಸಾರ್ವಜನಿಕರು ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಲು ಅನುಕೂಲವಾಗಬೇಕೆಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ರೀತಿಯ ಮೌನ ಧರಣಿ ಅಭಿಯಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿದೆ. ಬ್ಯಾಂಕುಗಳ ವ್ಯವಹಾರದಲ್ಲಿರುವ ಚೆಕ್, ಡಿಡಿ ಸೇರಿದಂತೆ ಅನೇಕ ಕಚೇರಿ ವ್ಯವಹಾರಗಳ ಪತ್ರಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು.ಕನ್ನಡೇತರ ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ಭಾಷೆ ಕಲಿಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಮಾಡಿಕೊಡಲಿದೆ.ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಇಂದು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಬ್ಯಾಂಕ್‍ಗಳ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಪ್ರಾಧಿಕಾರವು ಕೈಗೊಳ್ಳಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ತಿಳಿಸಿದರು.
ಅಭಿಯಾನದಲ್ಲಿ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಆನಂದ ಸಿದ್ದಾಮಣಿ,ಡಾ.ಶ್ರೀಶೈಲ ನಾಗರಾಳ, ಬಿ ಎಚ್ ನಿರಗುಡಿ, ಸಂಗಮನಾಥ ರೇವತಗಾಂವ ಸೇರಿದಂತೆ ಕನ್ನಡಪರ ಸಂಘಟನೆಯ ಮುಖಂಡರು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.