ಕನ್ನಡದ ಅಸ್ಮಿತೆಗೆ ಡಾ.ಚನ್ನಬಸವ ಪಟ್ಟದೇವರ ಕೊಡುಗೆ ಅನನ್ಯ

ಕಲಬುರಗಿ:ಡಿ.23: ಮರಾಠಿ ಮತ್ತು ಉರ್ದು ಪ್ರಭಾವಕ್ಕೆ ಸಿಲುಕಿ ನಲುಗಿ ಹೋಗಿದ್ದ ಕರ್ನಾಟಕದ ಗಡಿಜಿಲ್ಲೆಯಾದ ಬೀದರ, ಬಾಲ್ಕಿ ಪ್ರದೇಶಗಳಲ್ಲಿ ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಿದ ಭಾಲ್ಕಿಯ ಹಿರೇಮಠದ ಪರಮಪೂಜ್ಯ ಲಿಂ.ಡಾ.ಚನ್ನಬಸವ ಪಟ್ಟದೇವರ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಲಿಂ.ಡಾ.ಚನ್ನಬಸವ ಪಟ್ಟದೇವರ ಜಯಂತಿ’ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಅಸ್ಮಿತೆಯನ್ನು ಕಾಪಾಡಿದ ಪೂಜ್ಯರು ಕನ್ನಡದ ಪಟ್ಟದೇವರಾಗಿದ್ದಾರೆ. ಶರಣ ತತ್ವವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಬದುಕಿದ ಅವರ ಜೀವನ ಸಮಾಜಕ್ಕೆ ಮಾದರಿಯಾಗಿದೆ. ಶರಣ ಸಂಸ್ಕøತಿಯನ್ನು ಎಲ್ಲೆಡೆ ಮುಟ್ಟಿಸುವ ಕಾರ್ಯಮಾಡಿದ್ದಾರೆ. ಅನೇಕ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಅವರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಪರಮಪೂಜ್ಯರು ಸಮಾಜಕ್ಕೆ ಆದರ್ಶ ಗುರುವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಬಿರಾದಾರ, ಶಿಕ್ಷಕರಾದ ಶ್ವೇತಾ ಮುತ್ತಾ, ಲಕ್ಷ್ಮೀ ಇಂಡಿ, ಪ್ರಿಯಾಂಕಾ ವಾಲಿ, ಪ್ರಮೋದ ಕುಲಕರ್ಣಿ, ವಿಶ್ವನಾಥ ನಂದರ್ಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.