ಕನ್ನಡದಲ್ಲೊಂದು ವಿಭಿನ್ನ ಪ್ರಯತ್ನ  `45′

•             ಚಿ.ಗೋ ರಮೇಶ್

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನಿರ್ದೇಶಕರಾಗುತ್ತಿದ್ದಾರೆ ಎನ್ನುವ ವಿಷಯ ಹೊರಬಿದ್ದಿತ್ತು. ಇದೀಗ ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಮುಂದಾಗಿದೆ.

ಪ್ರಶಸ್ತಿ ವಿಜೇತ ಹಾಗು ಸದಭಿರುಚಿಯ ನಿರ್ಮಾಪಕ ರಮೇಶ್ ರೆಡ್ಡಿ ಅವರ ನಿರ್ಮಾಣ ಮಾಡುತ್ತಿರುವ “45” ಚಿತ್ರಕ್ಕೆ ಸಾಂಸ್ಕøತಿಕ ರಾಜಧಾನಿ ಮೈಸೂರಿನಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಚಿತ್ರದಲ್ಲಿ ಶಿವರಾಜ್‍ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ರವಿಶಂಕರ್ ಮತ್ತಿತರರು ಕಾಣಿಸಿಕೊಳ್ಳಲಿದ್ದು ನಾಯಕಿಯಾಗಿ ಕೌಸ್ತುಭ ಮಣಿ ಆಯ್ಕೆಯಾಗಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಅರ್ಜುನ್ ಜನ್ಯ, ಕನ್ನಡ ಚಿತ್ರರಂಗಲ್ಲಿ ವಿಭಿನ್ನ ಪ್ರಯತ್ನ “45”. ಚಿತ್ರವನ್ನು ತೆರೆಗೆ ತರುವ ಮುನ್ನ “ಪ್ರೀ ವಿಷುವಲ್ಸ್” ತಂತ್ರಜ್ಞಾನದ ಮೂಲಕ ಎಡಿಟಿಂಗ್,ಡಬ್ಬಂಗ್ ,ಡಿಟಿಎಸ್ ಮಾಡಿ ಇಡೀ ಸಿನಿಮಾವನ್ನು ನಿರ್ಮಾಪಕರು ಸೇರಿದಂತೆ ಎಲ್ಲಾ ಕಲಾವಿದರಿಗೆ ಚಿತ್ರಮಂದಿರದಲ್ಲಿ ಚಿತ್ರ ತೋರಿಸಿದ್ದೇನೆ. ಚಿತ್ರ ನೋಡಿ ಎಲ್ಲರೂ ಥ್ರಿಲ್ ಆಗಿದ್ದಾರೆ. ಇದಕ್ಕಾಗಿ ಮೂರು ವರ್ಷ ಸಿದ್ದತೆ ಮಾಡಿಕೊಳ್ಳಲಾಗಿತ್ತು ಎಂದರು.

ಈ ರೀತಿಯ ತಂತ್ರಜ್ಞಾನದ ಮೂಲಕ ಸಿನಿಮಾ ಸಿದ್ದಪಡಿಸುವುದು ನಿರ್ಮಾಪಕರಿಗೂ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಮೊದಲೇ ಸಿನಿಮಾವನ್ನು ಎಲ್ಲಾ ಕಲಾವಿದರು ನೋಡಿರುವುದರಿಂದ ಇದೇ ರೀತಿ ಮೂಡಿಬಡಲಿದೆ ಎನ್ನುವ ನಂಬಿಕೆಯೂ ಕೂಡ ಅವರಲ್ಲಿರಲಿದೆ. ಮೊದಲೇ ನಿಗಧಿ ಪಡಿಸಿಕೊಂಡ ಕಥೆ, ಸನ್ನಿವೇಶಕ್ಕೆ ತಕ್ಕಂತೆ ಕೆಲಸ ಮಾಡಲು ಸಹಕಾರಿಯಾಗಲಿದೆ. ಈ ಮಾದರಿ ತಂತ್ರಜ್ಞಾನವನ್ನು ಕನ್ನಡಲ್ಲಿ ಹಲವು ನಿರ್ದೇಶಕರು ಅಳವಡಿಸಿಕೊಳ್ಳಬಹುದು ಎನ್ನುವ ವಿಶ್ವಾಸ  ಅವರದು.

“45” ಹೊಸ ಜಾನರ್‍ನ ಚಿತ್ರ. ಇಂತಹುದೇ ಜಾನರ್ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಚಿತ್ರದಲ್ಲಿ ಆಕ್ಷನ್ ಕಾಮಿಡಿ, ಥ್ರಿಲ್ಲರ್, ರೋಮಾನ್ಸ್ ಸೇರಿ ಎಲ್ಲಾ ಅಂಶಗಳೂ ಕೂಡ ಚಿತ್ರದಲ್ಲಿ ಇರಲಿವೆ. ಚಿತ್ರದಲ್ಲಿ ಹಿನ್ನೆಲೆ ಸಂಗೀತದ ಮೂಲಕ ಹಾಡುಗಳು ಮೂಡಿಬರಲಿವೆ. ಹೊಸ ಪ್ರಯತ್ನ ಮಾಡಲಾಗುತ್ತಿದೆ ,ಮೊದಲ ಹಂತದ ಚಿತ್ರೀಕರಣ ಮುಗಿದ ಬಳಿಕ ರಾಜ್ಯದಲ್ಲಿಯೇ ಸರಿ ಸುಮಾರು  100 ದಿನಗಳ ಕಾಲ ಚಿತ್ರೀಕರಣ ಮಾಡುವ ಗುರಿ ಇದೆ. ಎಲ್ಲರಿಗೂ ಇಷ್ಟವಾಗುವ ಮನರಂಜನಾತ್ಮಕ ಚಿತ್ರ ನೀಡುವ ಉದ್ದೇಶ ನಮ್ಮದು ಎಂದು ಭರವಸೆ ನೀಡಿದರು.

ಕಥೆ ಒಪ್ಪಿಸುವುದು ಕಷ್ಟ

ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ಉಪೇಂದ್ರ ಸರ್ ಅವರಿಗೆ ಕಥೆ ಒಪ್ಪಿಸುವುದು ಕಷ್ಟಕರ ಸಂಗತಿ. ಕತೆ ಕೇಳಿ ಇಷ್ಟಪಟ್ಟಿದ್ದಾರೆ ಎಂದರೆ ಚಿತ್ರದಲ್ಲಿ ಎಲ್ಲರಿಗೂ ಉತ್ತಮ ಪಾತ್ರವಿದೆ. “ಪ್ರೀ ವಿಷಯವಲ್ಸ್ “ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಹಲವು ನಿರ್ದೇಶಕರು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

-ಅರ್ಜುನ್ ಜನ್ಯಾ, ನಿರ್ದೇಶಕ

ಅಮ್ಮನ ಆಶೀರ್ವಾದ

ನಾಡದೇವತೆ ಚಾಮುಂಡೇಶ್ವರಿ ಅಮ್ಮನ ಆಶೀರ್ವಾದ ಪಡೆದು ಚಿತ್ರೀಕರಣ ಆರಂಭಿಸಲಾಗುವುದು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್ಲಾ ತಯಾರಿ ಮತ್ತು ಸಿದ್ದತೆ ಮಾಡಿಕೊಂಡಿದ್ದೇವೆ. ಬಹು ತಾರಾಗಣವಿರುವ ಉತ್ತಮ ಕಥೆ ಚಿತ್ರದಲ್ಲಿದೆ. ಎಲ್ಲರಿಗೂ ಇಷ್ಟವಾಗುವ ಉತ್ತಮ ಚಿತ್ರವನ್ನು ನೀಡುತ್ತೇವೆ.

–              ರಮೇಶ್ ರೆಡ್ಡಿ, ನಿರ್ಮಾಪಕ