ಕನ್ನಡದಲ್ಲಿ ವಿಜ್ಞಾನ ಜನಪ್ರಿಯಗೊಳಿಸುವುದು ಅತ್ಯವಶ್ಯ

ಬಳ್ಳಾರಿ, ಜ.11: ವಿಜ್ಞಾನ-ತಂತ್ರಜ್ಞಾನಗಳು ವೇಗವಾಗಿ ಸಾಗುತ್ತಿವೆ, ಅಂತೆಯೇ ಕನ್ನಡದಲ್ಲಿ ವಿಜ್ಞಾನ ಜನಪ್ರಿಯಗೊಳಿಸುವುದು ಅತ್ಯವಶ್ಯವಾಗಬೇಕಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರುನೂರು ಟಿ. ಕೊಟ್ರಪ್ಪ ಅಭಿಪ್ರಾಯಪಟ್ಟರು. ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನಲ್ಲಿ ಶನಿವಾರದಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕ.ರಾ.ವಿ.ಪ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾ‍ಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. ವಿದ್ಯಾರ್ಥಿಗಳಿಗೆ ಕನ್ನಡ ವಿಜ್ಞಾನ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಕನ್ನಡದಲ್ಲಿ ವಿಜ್ಞಾನ ಜನಪ್ರಿಯತೆಗಾಗಿ ಗಾಂಧಿವಾದಿ ಡಾ.ಎಚ್. ನರಸಿಂಹಯ್ಯನವರು ಕ.ರಾ.ವಿ.ಪ.ವನ್ನು ಅಂದು ಸ್ಥಾಪಿಸಿದ್ದು, ಶ್ಲಾಘನೀಯ ಕಾರ್ಯವಾಗಿದೆ. ಜ್ಞಾನ-ವಿಜ್ಞಾನಗಳ ಬೆಳವಣಿಗೆಗಳೆ, ಮನುಕುಲದ ಅಭ್ಯುದಯಕ್ಕೆ ಸಹಕಾರಿಯಾಗಿವೆ ಎಂದರು.
ವಿಜ್ಞಾನ ಮತ್ತು ವೈಚಾರಿಕತೆಗಳು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಮಹತ್ವದ ಪಾತ್ರ ನಿರ್ವಹಿಸುತ್ತವೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಂಥಾ ಸ್ಪರ್ಧೆಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ ಎಂದು ಎ.ಎಸ್.ಎಂ. ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ವೈ. ತಿಮ್ಮಾರೆಡ್ಡಿ ತಿಳಿಸಿದರು. ವಿಜ್ಞಾನದ ಬೆಳವಣಿಗೆ, ಹೊಸ ಉಪಕರಣಗಳ ಆವಿಷ್ಕಾರ, ಕನ್ನಡದಲ್ಲಿ ನವೀನ ವಿಜ್ಞಾನ ಪದಗಳ ಬಳಕೆಗೆ ಇಂಬು ನೀಡಿದೆ ಎಂದು ಸರ್ಧೆಗೆ ನಿರ್ಣಾಯಕರಾಗಿ ಆಗಮಿಸಿದ್ದ, ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ಪ್ರಾಚಾರ್ಯ, ವಿಜ್ಞಾನ ಸಂವಹನಕಾರರಾದ ಎಸ್.ಮಂಜುನಾಥ ತಿಳಿಸಿದರು. ರಾಜ್ಯ ವಿಜ್ಞಾನ ಪರಿಷತ್ತಿನಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಭಿನ್ನವಾದ ಕಾರ್ಯಕ್ರಮಗಳು ನಿರಂತರವಾಗಿ ಆಯೋಜಿಸಲಾಗುತ್ತಿದೆ ಇದನ್ನು ಸದ್ಬಳಕೆ ಮಾಡಕೊಳ್ಳಬೇಕೆಂದು ಕನ್ನಡ ವಿಜ್ಞಾನ ಸ್ಪರ್ಧೆಯ ಸಂಯೋಜಕರು, ಎ.ಎಸ್.ಎಂ. ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಗೋವಿಂದರಾಜು ಪ್ರಾಸ್ತವಿಕವಾಗಿ ತಿಳಿಸಿದರು. ವಿ.ಎಸ್.ಕೆ. ವಿ.ವಿ.ಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಉಮಾರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ.ರಾ.ವಿ.ಪ.ದ ಕೆ. ರಾಮಣ್ಣ ಸ್ವಾಗತಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಜಿ.ಎಂ. ಶರಣ ಬಸವ ಕಾರ್ಯಕ್ರಮ ನಿರ್ವಹಿಸಿದರು. ಬಳ್ಳಾರಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಜಿ.ವಿ. ಶಿವರಾಜ್, ಉಪನ್ಯಾಸಕ ಪ್ರಕಾಶ್ ಗೌಡ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಶಿವಾನಂದ, ಪ್ರವೀಣ್ ಕುಮಾರ್, ಶಿವಕುಮಾರ್ ಹೆಚ್., ಸುನಿಲ್ ಇವರುಗಳಿಗೆ ನಗದು ಬಹುಮಾನ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.