ಕನ್ನಡದಲ್ಲಿ ನಾಮಫಲಕಕ್ಕೆ ಸೂಚನೆ

ಹೊಸಪೇಟೆ, ಅ.28: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಹೊಸಪೇಟೆ ನಗರದ ಕೆಲ ಅಂಗಡಿಗಳ ಮಾಲೀಕರಿಗೆ ನಗರ ಸಭೆಯಿಂದ ನೋಟಿಸ್ ನೀಡಲಾಯಿತು.
ಮಂಗಳವಾರ ನಗರಸಭೆಯ ಆರೋಗ್ಯ ನಿರೀಕ್ಷಕ ವೆಂಕಟೇಶ್‍ರ ತಂಡ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಪದ ಬಳಕೆ ಮಾಡದ ನಗರದಲ್ಲಿರುವ ಪುಣ್ಯಮೂರ್ತಿ ವೃತ್ತ, ಬಸ್ ಸ್ಟ್ಯಾಂಡ್ ರಸ್ತೆ, ಸ್ಟೇಷನ್ ರಸ್ತೆ ಮೇನ್ ಬಜಾರ್, ರಾಮ ಟಾಕೀಸ್ ಏರಿಯಾದ ಕೆಲ ಅಂಗಡಿಗಳಿಗೆ ತೆರಳಿ, ಮಾಲೀಕರಿಗೆ ಕಡ್ಡಾಯವಾಗಿ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಪದಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೋಟಿಸ್ ನೀಡಿದರು.
ನಗರಸಭೆ ಆರೋಗ್ಯ ನಿರೀಕ್ಷಕ ವೆಂಕಟೇಶ್ ಮಾತನಾಡಿ, ಅಂಗಡಿ ನಾಮಫಲಕಗಳಲ್ಲಿ ಅನ್ಯಭಾಷೆಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಪರಿಶೀಲಿಸಿದಾಗ ಕೆಲ ಅಂಗಡಿ ಮಾಲೀಕರು ಕನ್ನಡ ಭಾಷೆ ಬಳಸದಿರುವುದು ಕಂಡು ಬಂದಿದೆ. ಈಗಾಗಲೇ 14 ಅಂಗಡಿಗಳಿಗೆ ಈ ಕುರಿತು ನೋಟಿಸ್ ನೀಡಲಾಗಿದೆ.
ಅಕ್ಟೋಬರ್ 31ರ ಒಳಗಾಗಿ ನಗರದ ಎಲ್ಲಾ ಅಂಗಡಿ ಮಾಲೀಕರು ನಾಮಫಲಕಗಳಲ್ಲಿ ಶೇ.60ರಷ್ಟು ಪದಗಳನ್ನು ಬಳಕೆ ಮಾಡಬೇಕು. ಇಲ್ಲವಾದಲ್ಲಿ ನವಂಬರ್ 2ರಂದು ನಮ್ಮ ಸಿಂಬ್ಬಂದಿಯೊಂದಿಗೆ ಬಂದು ನಾಮಫಲಕಗಳಿಗೆ ಬಿಳಿ ಶಾಹಿಯನ್ನ ಬಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಮತ್ತು ಕನ್ನಡಪರ ಸಂಘಟನೆಗಳು ನಗರಸಭೆಯ ಅಧಿಕಾರಿಗಳ ಈ ಕಾರ್ಯವೈಖರಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಬಾಕ್ಸ್ ಐಟಂ
ದೊಡ್ಡ ಮಾಲ್‍ಗಳಲ್ಲಿ ಕನ್ನಡ ಪದಗಳನ್ನು ಬಳಸದೇ ಅನ್ಯ ಭಾಷೆಯ ಪದಗಳನ್ನ ಬಳಸಿ, ಕನ್ನಡ ಅಕ್ಷರಗಳನ್ನ ಸಣ್ಣವು ಮಾಡಿ, ಅನ್ಯ ಭಾಷೆಯ ಅಕ್ಷರಗಳನ್ನ ದೊಡ್ಡವು ಮಾಡಿ ನಾಮಫಲಕಗಳನ್ನ ಹಾಕುತ್ತಿದ್ದರು. ನಾವು ಸಹ ಅಂಗಡಿ ಮಾಲ್‍ಗಳಲ್ಲಿ ಕನ್ನಡ ಪದಗಳನ್ನು ಬಳಸುತ್ತಿಲ್ಲ ಎಂದು ಹಲವು ಬಾರಿ ನಗರಸಭೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಈಗ ನಗರಸಭೆಯ ಅಧಿಕಾರಿಗಳು ಕಾರ್ಯರೂಪಕ್ಕೆ ಇಳಿದಿರುವುದು ನಮಗೆ ಸಂತಸ ತಂದಿದೆ. ಅವರು ಹೀಗೆ ಕೆಲಸ ಮಾಡುತ್ತಿದ್ದರೇ ನಮ್ಮ ಬೆಂಬಲ ಮತ್ತು ಸಹಕಾರ ಇರುತ್ತದೆ ಎಂದು ಹೇಳಿದರು. ತಳವಾರ ಹನುಮಂತಪ್ಪ. ಅಧ್ಯಕ್ಷರು, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ.