ಕನ್ನಡದಲ್ಲಿ ಟ್ವೀಟ್‌ ಮಾಡಿ ಮುನಿರತ್ನ, ರಾಜುಗೌಡಗೆ ಅಭಿನಂದಿಸಿದ ಮೋದಿ, ಅಮಿತ್‌ ಶಾ


ಬೆಂಗಲೂರು, ನ 11 -ಆರ್.ಆರ್‌.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ರಾಜುಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಭ ಕೋರಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಕನ್ನಡದಲ್ಲಿಯೇ ಶುಭಕೋರಿರುವ ಮೋದಿ, ”ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನಃ ದೃಢೀಕರಿಸುತ್ತದೆ” ಎಂದಿದ್ದಾರೆ.
ಅಮಿತ್‌ ಶಾ ಕೂಡ ಕನ್ನಡದಲ್ಲೇ ಟ್ವೀಟ್‌ ಮಾಡಿದ್ದು, “ಬಿಜೆಪಿಗೆ ನಿರಂತರ ಬೆಂಬಲ ಬೀಡುತ್ತಿರುವ ಕರ್ನಾಟಕಕ್ಕೆ ಧನ್ಯವಾದಗಳು. ಉಪಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ನಳೀನ್‌ ಕುಮಾರ್‌ ಕಟೀಲ್‌ ಮತ್ತು ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಡಿ ರಾಜ್ಯ ಅಭಿವೃದ್ಧಿ ಸಾಧಿಸಲಿದೆ” ಎಂದು ಅಭಿನಂದಿಸಿದ್ದಾರೆ.