ಕನ್ನಡತನದ ಜಾಗೃತಿ ಮೂಡಿಸಲು ಇಂತಹ ಸಮ್ಮೇಳನಗಳು ಸಹಕಾರಿ

ವಿಜಯಪುರ:ಮಾ.25: ಈ 18ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಸಾಹಿತಿಗಳು, ಸಾಹಿತಾಶಕ್ತರು ಭಾಗವಹಿಸುವ ಮೂಲಕ ಅತ್ಯಂತ ಯಶಸ್ವಿಯಾಗುವಂತೆ ಮಾಡಿದ್ದಾರೆ ಇಷ್ಟೊಂದು ಅಚ್ಚುಕಟ್ಟಾಗಿ ಸಮ್ಮೇಳನವನ್ನು ಹಮ್ಮಿಕೊಂಡ ಕೀರ್ತಿ ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ್ ಅವರಿಗೆ ಸಲ್ಲಬೇಕು ಎಂದು ಸಿಂದಗಿಯ ಯುವನಾಯಕ ಅಶೋಕ ಮನಗೂಳಿ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ 18ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನದ 4ನೇ ಗೋಷ್ಠಿಯನ್ನು ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ನಮ್ಮ ನಾಡು, ನಮ್ಮ ಭಾಷೆ ಈ ನಾಡಿನ ಕೀರ್ತಿಯನ್ನು ಇಡೀ ದೇಶಕ್ಕೆ ಪಸರಿಸುವಂತೆ ಮಾಡಿದ್ದಾರೆ. ಅಂತಹ ಸಾಹಿತಿಗಳನ್ನು ಯಾವಾಗಲೂ ನಾವು ಮರೆಯಬಾರದು. ಬರೀ ಒಂದು ದಿನಕ್ಕೆ ಮಾತ್ರ ನಮ್ಮ ಭಾಷೆಯ ಮೇಲೆ ಅಭಿಮಾನ ಬೇಡ ಇದು ಪ್ರತಿದಿನ, ಪ್ರತಿ ಕ್ಷಣ ಇರಬೇಕು. ನಮ್ಮಲ್ಲಿರುವ ಕನ್ನಡತನದ ಜಾಗೃತಿ ಮೂಡಿಸಲು ಇಂತಹ ಸಮ್ಮೇಳನಗಳು ಸಹಕಾರಿಯಾಗಿವೆ. ಇನ್ನು ಮುಂದಿನ ದಿನಮಾನಗಳಲ್ಲಿ ನಮ್ಮ ವಿಜಯಪುರದಲ್ಲಿ ರಾಜ್ಯಮಟ್ಟದ ಕನ್ನಡ ಸಮ್ಮೇಳನ ನಡೆಯುವ ಮೂಲಕ ಇಡೀ ರಾಜ್ಯಕ್ಕೆ ವಿಜಯಪುರವನ್ನು ಗುರುತಿಸುವ ರೀತಿಯಲ್ಲಿ ನಾವೆಲ್ಲರೂ ಅದನ್ನು ಯಶಸ್ವಿಗೊಳಿಸೋಣ ಎಂದು ಆಶಿಸುತ್ತೇನೆ ಎಂದರು.

ತಾಳಿಕೋಟಿ ಎಸ್.ಕೆ. ಪದವಿ ಕಾಲೇಜಿನ ಪ್ರಾಧ್ಯಾಪಕಿ ಸುಜಾತಾ ಚಲವಾದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯನ್ನು ಪುಟ ತೆಗೆದು ನೋಡಿದಾಗ ನಮ್ಮ ಹಿರಿಯ ಸಾಹಿತಿಗಳ ಕೊಡುಗೆ ಎಷ್ಟು ಮತ್ತು ನಮ್ಮ ಕನ್ನಡ ಎಷ್ಟು ಸಮೃದ್ಧವಾಗಿದೆ ಎಂಬುವುದನ್ನು ನಾವು ಅರಿಯಬಹುದು ಎಂದು ಸುಜಾತಾ ಚಲವಾದಿ ಹೇಳಿದರು.

ಕನ್ನಡ ಇಂದು ನಿನ್ನೆಯದಲ್ಲ. ಕನ್ನಡದ ಇತಿಹಾಸವನ್ನು ನೋಡುತ್ತಾ ಹೋದಾಗ ಲಲಿತ ವಿಸ್ತಾರ ಎಂಬ ಕೃತಿಯಿಂದ ನಾವು ಅದನ್ನು ನೋಡುತ್ತಾ ಬರುತ್ತೇವೆ. ಅದರಲ್ಲಿ 14 ಲಿಪಿಗಳಿವೆ. ಅಲ್ಲಿಂದ ನಮಗೆ ಕನ್ನಡ ಪ್ರಾರಂಭವಾಗಿದ ಇತಿಹಾಸ ದೊರಕುತ್ತದೆ.

ನಮ್ಮ ಭಾಷೆ ಸಂಪತ್ಭರಿತವಾಗಿ ಬೆಳೆಯಲು ನಮ್ಮ ಸಾಹಿತಿಗಳು ಕಾರಣ. ನಮ್ಮ ಭಾಷೆಯ ಶ್ರೀಮಂತಿಕೆ ಹೆಚ್ಚಲು ಸಾಹಿತ್ಯ ಲೋಕದ ಕೊಡುಗೆ ಅಪಾರ ಎಂದರು.

ಭಾಷೆ ಎಂಬುವಂತದ್ದು ಅದು ನನ್ನ ತಾಯಿ ಎಂದುಕೊಳ್ಳಬೇಕು ಅಂದಾಗ ನಾನು ಅದನ್ನು ಹೆಚ್ಚು ಪ್ರೀತಿ ಮಾಡುತ್ತೇವೆ. ಅದು ನಮ್ಮದಲ್ಲ ಎಂದಾಗ ನಾವು ಅದನ್ನು ಪರಕೀಯ ಭಾಷೆಯೆಂದು ತಿಳಿದುಕೊಳ್ಳುತ್ತೇವೆ.

ಇನ್ನು ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಯವರಿಗೆ ಅವಕಾಶಗಳು ಕಡಿಮೆ ಕನ್ನಡ ಎಂದರೆ ಮುಗು ಮುರಿಯುವವರೆ ಜಾಸ್ತಿ ಅಂತಹ ಸ್ಥಿತಿ ದೂರಾಗಬೇಕಿದೆ. ಕನ್ನಡ ಭಾಷೆಗೂ ತನ್ನದೇ ಆದ ಇತಿಹಾಸವಿದೆ ಅದು ಸಮೃದ್ಧವಾದಂತಹ ಭಾಷೆ ಅದರ ಬಗ್ಗೆ ಕೀಳರಿಮೆ ಮೂಡಬಾರದು ಎಂದರು.

ಈ ಕನ್ನಡ ಶಾಲೆಗಳು ಏಕೆ ಬೇಡವಾಗಿವೆ ಎಂಬುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಗುಣಮಟ್ಟದ ಸೌಕರ್ಯಗಳನ್ನು ನೀಡಲಾಗುತ್ತದೆ. ಆದರೆ ಅದೇ ಪರಿಸ್ಥಿತಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವುದಿಲ್ಲ. ಹೀಗಾಗಿ ಸರಕಾರಿ ಶಾಲೆಗಳಿಗೂ ಹೈಟೆಕ್ ಟಚ್ ನೀಡಬೇಕಾದ ಅವಶ್ಯಕತೆ ಇದೆ. ಉತ್ತಮ ಸೌಕರ್ಯಗಳನ್ನು ನೀಡುವ ಮೂಲಕ ಉತ್ತಮ ವಾತಾವರಣ ಸೃಷ್ಟಿಸಿದ್ದಲ್ಲಿ ಕನ್ನಡ ಶಾಲೆಗಳು ಉಳಿಯಲು ಸಾಧ್ಯವಾಗುತ್ತದೆ ಎಂದರು.

ಕನ್ನಡವಾದಿಗಳು ನಾವು ಬಹಳ ಉದಾರಿಗಳು. ಏಕೆಂದರೆ ಒಂದು ದಿನ ನಾನು ಚೆನೈಗೆ ಹೋದಾಗ ಅಲ್ಲಿ ಯಾವ ಅಂಗಡಿ-ಮುಗ್ಗಟ್ಟುಗಳಲ್ಲಿ ಎಲ್ಲ ಫಲಕಗಳ ಮೇಲೆ ಒಂದೇ ಒಂದು ಇಂಗ್ಲೀಷ್ ಪದಗಳನ್ನು ಬಳಸಿರಲಿಲ್ಲ. ಅಲ್ಲಿ ಅವರು ತಮ್ಮದೇ ಆದ ಭಾಷೆಯ ಮೂಲಕವೇ ಅವರು ಗ್ರಾಹಕರೊಂದಿಗೆ ವ್ಯವಹರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ನಾವು ಯಾವುದೇ ಅಂಗಡಿ ನೋಡಿ ಆ ಅಂಗಡಿ ಫಲಕಗಳ ಮೇಲೆ ಎಲ್ಲ ಭಾಷೆಗಳಿಂದ ಬರೆಯಲಾಗುತ್ತದೆ ಪ್ರಮುಖವಾಗಿ ಇಂಗ್ಲೀಷ್ ಭಾಷೆಯಲ್ಲಿ ಬರೆದು ಕೊನೆಯಲ್ಲಿ ನಮ್ಮ ಕನ್ನಡ ಭಾಷೆಯಲ್ಲಿ ಬರೆದಿರುತ್ತಾರೆ ಇದು ಅತ್ಯಂತ ವಿಷಾದನೀಯ ಸಂಗತಿ ಎಂದರು.

ಇಷ್ಟರ ಮಟ್ಟಿಗೆ ನಾವು ಇಂಗ್ಲಿಷ್ ಭಾಷೆಗೆ ಹೆಚ್ಚು ಒತ್ತು ಕೊಡುವ ಮೂಲಕ ನಮ್ಮ ಭಾಷೆಯ ಮೇಲಿರುವ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಬೇರೆ ಭಾಷೆಯನ್ನು ಕಲಿಯಬಾರದು ಎಂದೆನಿಲ್ಲ ಆದರೆ ಮೊದಲು ನಮ್ಮ ಭಾಷೆ. ಆಮೇಲೆ ಬೇರೆ ಭಾಷೆ ಎಂದಾಗಬೇಕು ಅಂದಾಗ ಮಾತ್ರ ನಾವು ನಮ್ಮ ತಾಯಿ ಭಾಷೆ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯ.

ನಾದ ಕೆ.ಡಿಯ ಸರಕಾರಿ ಪ್ರೌಡಶಾಲೆ ಮುಖ್ಯಾಧ್ಯಪಕ ಸಿಎಂ ಬಂಡಗರ ಗಡಿನಾಡಲ್ಲಿ ಕನ್ನಡ ಅಳಿವು ಉಳಿವು ವಿಯದ ಕುರಿತು ಉಪನ್ಯಾಸ ನೀಡಿ, ಗಡಿನಾಡು ಎನ್ನುವಂತ ಶಬ್ಧದ ಬಗ್ಗೆ ನಾವು ಚಿಂತಿಸುವಾಗ ಕವಿರಾಜಮಾರ್ಗರು ಕನ್ನಡದ ಬಗ್ಗೆ ವಿವರಿಸಿದ್ದನ್ನು ನಾವು ಮರೆಯಬಾರದು. 10ನೇ ಶತಮಾನದಲ್ಲಿಯೇ ಕನ್ನಡ ಭಾಷೆಯ ಸಮೃದ್ಧತೆಯ ಬಗ್ಗೆ, ವಿಸ್ತಾರತೆಯ ಬಗ್ಗೆ ಹೇಳಿದ್ದರು.

1956ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಆದರೆ ಆಗ ರಾಜಧಾನಿಯನ್ನು ಬೆಂಗಳೂರಿಗೆ ಮಾಡಬೇಕೊ ಅಥವಾ ಮೈಸೂರಿಗೆ ಮಾಡಬೇಕು ಎಂಬುವುದನ್ನು ತಲೆ ಕೆಡಿಸಿಕೊಂಡಿತು. ಈ ನಡುವೆ ಗಡಿನಾಡ ಹೊರಗಡೆ ಎಷ್ಟೋ ಜನ ಕನ್ನಡಿಗರು ಉಳಿದುಕೊಂಡರು.

ನಮ್ಮ ಗಡಿನಾಡಿನಲ್ಲಿ ನಮ್ಮ ಕನ್ನಡಿಗರಿಗೆ ಸೂಕ್ತವಾದ ವಾತಾವರಣವನ್ನು ಅಲ್ಲಿಯ ರಾಜ್ಯಗಳು ಸೃಷ್ಟಿಸಿ ಕೊಟ್ಟಿಲ್ಲ ಅವರ ಮೇಲೆ ಸದಾ ವಕೃದೃಷ್ಟಿಯನ್ನು ಬೀರುತ್ತವೆ. ಅಲ್ಲಿಯ ಸರಕಾರಗಳು ಕನ್ನಡಿಗರನ್ನು ಇಂದಿಗೂ ಕಡೆಗಣಿಸುತ್ತಿದ್ದಾವೆ. ಭಾಷಾ ಅಲ್ಪಸಂಖ್ಯಾತರಿಗೆ ಸರಿಯಾದ ಯೋಜನೆಗಳನ್ನು ರೂಪಿಸಿ ಅವರ ಹಿತಗಳನ್ನು ಕಾಪಾಡುವಲ್ಲಿ ವಿಫಲವಾಗಿವೆ. ಅಲ್ಲಿರುವ ಕನ್ನಡಿಗರು ಈ ಕಡೆ ಕರ್ನಾಟಕಕ್ಕೆ ಬರಲೂ ಆಗದೆ, ಆ ಕಡೆ ಉಳಿಯಲು ಆಗದೆ ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಗಡಿನಾಡ ಕನ್ನಡ ಅಳಿವಿನಂಚಿನಲ್ಲಿದೆಯಾ ಎಂಬ ಪ್ರಶ್ನೆ ಆತಂಕವನ್ನುಂಟು ಮಾಡುವಂತದ್ದು ಎಂದರು.

ಇನ್ನು ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ಕೆಲವರು ಮಾಡುತ್ತಾರೆ. ಕೇರಳದ ಕಾಸರಗೂಡಿನಲ್ಲಿ ಕನ್ನಡ ಶಾಲೆಯನ್ನು ಮುಚ್ಚುವಂತದ್ದು. ಅದರಂತೆ ಇನ್ನು ಹತ್ತು ಹಲವಾರು ಗಡಿ ಭಾಗಗಳಲ್ಲಿ ಈ ಸಮಸ್ಯೆ ಉಂಟಾಗಿದ್ದು ನಮ್ಮೆಲ್ಲರಿಗೂ ಗೊತ್ತಿದೆ ಅಂತಹ ಪರಿಸ್ಥಿತಿ ಬದಲಾಗಬೇಕು ಗಡಿಭಾಗದಲ್ಲಿಯೂ ಕನ್ನಡ ಶಾಲೆಗಳು ಉಳಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು.ಈ ನಿಟ್ಟಿನಲ್ಲಿ ಗಡಿನಾಡಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ನಾವೆಲ್ಲ ಪ್ರಯತ್ನ ಮತ್ತು ಹೋರಾಟ ಮಾಡಬೇಕಿದೆ. ಎಲ್ಲ ಗಡಿಗಳಲ್ಲಿ ಕನ್ನಡಿಗರ ಉಳಿವಿಗಾಗಿ ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡ ಉಳಿವಿಗಾಗಿ ಜಾನಪದರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿದ್ದರು. ವಚನಕಾರರು, ಸಾಹಿತಿಗಳು ಕನ್ನಡ ನಾಡಿನ ಗಡಿ ಭಾಗಗಳ ರಕ್ಷಣೆಗೆ ಸಾಕಷ್ಟು ಶ್ರಮಿಸಿವೆ ಎನ್ನುವುದು ಹೆಮ್ಮೆಯ ವಿಷಯ.

ಇನ್ನು ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ದಿನನಿತ್ಯ ಸಾಕಷ್ಟು ಜನ ಮಹಾರಾಷ್ಟ್ರಕ್ಕೆ ಖರೀದಿ ಸೇರಿದಂತೆ ಮುಂತಾದ ಕೆಲಸಗಳಿಗೆ ಹೋಗುತ್ತಾರೆ ಆದರೆ ಒಬ್ಬರೂ ಮರಾಠಿ ಭಾಷೆಯನ್ನು ಬಳಸುವುದಿಲ್ಲ. ಬದಲಿಗೆ ಸಾಂಗ್ಲಿ, ಜತ್ತ, ಅಕ್ಕಲಕೋಟಗಳಲ್ಲಿ ಕನ್ನಡವನ್ನು ಮಾತನಾಡುತ್ತಾರೆ ಇದು ನಮಗೆ ಹೆಮ್ಮೆ ತರುವ ವಿಷಯ.

ಕನ್ನಡ ಉಳಿಬೇಕೆಂದರೂ ಅದಕ್ಕೆ ಕನ್ನಡಿಗರೇ ಕಾರಣ ಕನ್ನಡ ಅಳಿಯಬೇಕೆಂದರು ಅದಕ್ಕೂ ಕನ್ನಡಿಗರೆ ಕಾರಣ ಹೀಗಾಗಿ ನಾವು ನಮ್ಮ ತಾಯಿ ಭಾಷೆಯಾದ ಕನ್ನಡವನ್ನು ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ವಿಜಯಪುರದ ಸಿಕ್ಯಾಬ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಮಲ್ಲಿಕಾರ್ಜುನ ಮೇತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನವೇ ಕನ್ನಡದ ಅಸ್ಮಿತೆಯನ್ನು ಉಳಿಸುವಂತದ್ದು ಎಂದರು.

ಪ್ರಸ್ತುತ ದಿನಮಾನದಲ್ಲಿ ಜಾಗತೀಕರಣ ಎಂಬುವುದು ನಮ್ಮ ಬದುಕಿನಲ್ಲಿ ಹಾಸುಹೊಕ್ಕು ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ನಾವು ಯಾವಾಗಲು ಬದಲಾದ ಸಮಯಕ್ಕೆ ಹೊಂದಿಕೊಂಡು ಹೋಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಆದರೆ ನಮ್ಮ ಭಾಷೆ ಮತ್ತು ಸಂಸ್ಕøತಿಯನ್ನು ಎಂದಿಗೂ ಮರೆಯಬಾರದು ಅದನ್ನು ಉಳಿಸಿಕೊಂಡು ಹಓಗುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪ್ರಸ್ತುತ ದಿನಮಾನದಲ್ಲಿ ಎಂತಹ ಅನಕ್ಷರಸ್ತ ಇದ್ದರೂ ಸಹ ಒಬ್ಬ ಕನಿಷ್ಠ 150 ರಿಂದ 200 ಪದಗಳನ್ನು ಇಂಗ್ಲಿಷ್ ಬಳಸುತ್ತಾನೆ ಎಂದು ಇತ್ತಿಚೇಗೆ ನಡೆದ ಸಮೀಕ್ಷೆ ತಿಳಿಸಿದೆ ಹಾಗಾಗಬಾರದು ನಾವು ಸದಾ ಕನ್ನಡವನ್ನು ಉಳಿಸಿಕೊಂಡು ಹೋಗಬೇಕು ಅದಕ್ಕಾಗಿಯೇ ಇಂತಹ ಕನ್ನಡ ಸಮ್ಮೇಳನಗಳು ನಡೆಯುತ್ತವೆ. ನಮ್ಮನ್ನು ಜಾಗೃತಿಗೊಳಿಸುತ್ತವೆ ಎಂದು ಹೇಳಿದರು.

ಗೋಷ್ಠಿಯ ಸಾನಿಧ್ಯವಹಿಸಿದ್ದ ಮಕಣಾಪುರದ ಸೋಮೇಶ್ವರ ಗುರುಪೀಠದ ಪೂಜ್ಯಶ್ರೀ ಸೋಮಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಭಾಷೆಯ ಮೇಲೆ ನಮಗೆ ಯಾವಾಗಲೂ ಅಭಿಮಾನವಿರಬೇಕು ನಮ್ಮ ಭಾಷೆಯನ್ನು ನಾವು ಉಳಿಸಿಕೊಳ್ಳಬೇಕು ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಬರೀ ಭಾಷಣದಲ್ಲಿ ಮಾತ್ರ ಇರಬಾರದು ಅದು ನಿಜ ಜೀವನದಲ್ಲಿಯೂ ಇರಬೇಕು ಎಂದರು.

ಮನಗೂಳಿಯ ಹಿರೇಮಠ ಸಂಸ್ಥಾನದ ಪೂಜ್ಯಶ್ರೀ ಷ ಬ್ರ. ಅಭಿನವ ಸಂಗನಬಸವ ಶಿವಾಚಾರ್ಯರು ಮಾತನಾಡಿ, ನಾವೆಲ್ಲರೂ ನಮ್ಮ ಹೆಮ್ಮೆಯ ನಾಡು ಕನ್ನಡ ನಾಡಲ್ಲಿ ಬದುಕುತ್ತಿದ್ದೇವೆ ಎಂಬುವುದನ್ನು ಮರೆಯಬಾರದು. ಕನ್ನಡಕ್ಕೆ ನಾವ್ಯಾವಗಲೂ ಬೇರೆ ಭಾಷೆಗಳಿಗಿಂತಹ ಹೆಚ್ಚಿನ ಆಧ್ಯತೆಯನ್ನು ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಇಂಗಳೇಶ್ವರದ ವಿರಕ್ತಮಠದ ಜಗದ್ಗುರು ಡಾ. ಸಿದ್ಧಲಿಂಗ ಮಾಹಾಸ್ವಾಮಿಗಳು ಮಾತನಾಡಿ, ಜಗತ್ತಿನ ಎಲ್ಲ ಭಾಷೆಗಳಿಗೂ ಹೋಲಿಸಿದರು ನಮ್ಮ ಭಾಷೆ ಅತೀ ಹೆಚ್ಚು ಅಕ್ಷರಗಳನ್ನು ಹೊಂದುವಲ್ಲಿ ಎರಡನೆ ಸ್ಥಾನದಲ್ಲಿದೆ. ಮೊದಲು ಸಂಸ್ಕøತ 53 ಅಕ್ಷರಗಳನ್ನು ಹೊಂದಿದ್ದರೆ ನಮ್ಮ ಭಾಷೆ 52 ಅಕ್ಷರಗಳನ್ನು ಹೊಂದಿದ ಅತ್ಯಂತ ಸಮೃದ್ಧ ಭಾಷೆಯಾಗಿದೆ. ಅಂತಹ ಭಾಷೆಯನ್ನು ನಾವು ಹೆಮ್ಮೆಯಿಂದ ಮಾತನಾಡಬೇಕು ಎಂದರು.

ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸಿದ್ದಣ್ಣ ಉತ್ನಾಳ, ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ, ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾಹಿತಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.

ಬಸವರಾಜ ಕುಂಬಾರ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಆನಂದ ಪಾರಗೊಂಡ ವಂದಿಸಿದರು, ಬಸವರಾಜ್ ರೆಬಿನಾಳ ನಿರೂಪಿಸಿದರು, ಶಿವಾನಂದ ಸಿಂಹಾಸನಮಠ ನಿರ್ವಹಿಸಿದರು.