ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದವರು ಕುವೆಂಪು


ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.23: ನವೋದಯ ಕಾಲದ ಸಾಹಿತ್ಯದಲ್ಲಿ ಅಗ್ರಗಣ್ಯ ಸಾಹಿತಿ,ಕವಿಗಳಾಗಿ ಬರೆದ ಶ್ರೀ ರಾಮಾಯಣ ದರ್ಶನಂ  ಮಹಾಗ್ರಂಥಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಕುವೆಂಪು ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಸ್ಮರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಕುವೆಂಪುರವರ ಪಕ್ಷಿಕಾಶಿ ಕವನಸಂಕಲದಿಂದ ಆಯ್ಕೆ ಮಾಡಿಕೊಂಡ ಹಸುರು ಪದ್ಯವನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪದ್ಯವಾಗಿಟ್ಟಿದ್ದಾರೆ.ಅವರ ಬಹುತೇಕ ಕೃತಿಗಳು ಪ್ರಕೃತಿಯನ್ನು  ಆಧಾರವಾಗಿಟ್ಟುಕೊಂಡೆ ಬರೆದಿದ್ದಾರೆ.
ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು ಅವರ ಪ್ರಸಿದ್ಧ ಕಾದಂಬರಿಗಳಾಗಿವೆ.ಬೆರಳ್ಗೆ ಕೊರಳ್,ಜಲಗಾರ,ಶೂದ್ರ ತಪಸ್ವಿ ಕೂಡ ಪ್ರಸಿದ್ಧ ನಾಟಕಗಳಾಗಿವೆ.ಆದ್ದರಿಂದ ಬೇಂದ್ರೆಯವರು ಕುವೆಂಪು ಕುರಿತು ಜಗದ ಕವಿ ಯುಗದ ಕವಿ ಎಂದು ಬಣ್ಣಿಸಿದ್ದಾರೆ ಎಂದರು.
ವಿದ್ಯಾರ್ಥಿಗಳು ಪ್ರಕೃತಿ ಪ್ರಿಯರಾಗಬೇಕು.ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವುದರ ಜೊತೆಗೆ ಪೋಷಣೆ ಮಾಡಬೇಕೆಂದು ಹೇಳಿದರು.
ಬೆಸ್ಟ್ ಶಾಲೆಯ ಕನ್ನಡ ಶಿಕ್ಷಕರಾದ ಎಂ.ಶ್ರೀಧರ ಅವರು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ನಂಬಿಕೆ ಮತ್ತು ವಿಶ್ವಾಸದಿಂದ ಮುನ್ನೆಡದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ  ಶಿಕ್ಷಕರಾದ ಜಿ.ವೀರೇಶ ಪೂಜೆ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ಸಂಕಲ್ಪದೊಂದಿಗೆ ಮುನ್ನಡೆದಾಗ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ನಿಲಯ ಪಾಲಕ ಅರುಣ್ ಕುಮಾರ್, ನೌಕರರಾದ ಸುದರ್ಶನ್, ಎರ್ರೆಮ್ಮ, ಲಕ್ಷ್ಮೀ, ರಮಾದೇವಿ, ಎಲ್ಲಕ್ಕ ಮುಂತಾದವರು ಉಪಸ್ಥಿತರಿದ್ದರು.