ಕನ್ನಡಕ್ಕೆ ಮಾಸ್ತಿ ಕೊಡುಗೆ ಅಜರಾಮರ

ಕಲಬುರಗಿ:ಜೂ.6: ವಿಶ್ವದ ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ, ಕನ್ನಡ ಭಾಷೆ ಸಾಹಿತ್ಯ, ಕಲೆ, ಸಂಸ್ಕøತಿಗೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಕನ್ನಡದ ಅಮೂಲ್ಯವಾದ ಆಸ್ತಿಯಾಗಿ, ಅಜರಾಮರವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ,ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ಎಂ.ಎಂ.ಎನ್ ಟ್ಯುಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸರಳವಾಗಿ ಜರುಗಿದ ‘ಮಾಸ್ತಿ ವೆಂಕಟೇಶ ಅಯ್ಯಂಗಾರರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮಾಸ್ತಿಯವರ ‘ಕೆಲವು ಸಣ್ಣ ಕಥೆಗಳು’ ಎಂಬ ಪ್ರಥಮ ಕೃತಿಯು 1920ರಲ್ಲಿ ಪ್ರಕಟವಾಯಿತು. ಇದು ಆಧುನಿಕ ಕನ್ನಡದ ಸಾಹಿತ್ಯದ ವಿಶಿಷ್ಟವಾದ ಮೊದಲ ಕೃತಿಯೆನಿಸಿದೆ. ಹಾಗೆ ನೋಡಿದರೆ ಸಣ್ಣಕಥೆಯನ್ನು ಮೊದಲು ಬರೆದವರು ಮಾಸ್ತಿಯವರಲ್ಲದೇ ಇದ್ದರೂ ಕೂಡಾ, ಕಥೆಗಳಿಗೆ ಮತ್ತು ಮಾಸ್ತಿಯವರಿಗೆ ಅನೋನ್ಯವಾದ ಬಾಂಧವ್ಯವಿದೆ. ಆದ್ದರಿಂದಲೇ ಇವರು ಕನ್ನಡ ಕಥಾ ಸಾಹಿತ್ಯದ ಪ್ರಮುಖರೆನಿಸಿಕೊಂಡು, ‘ಕನ್ನಡದ ಆಸ್ತಿ’ಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಮಾಸ್ತಿಯವರ ಸಣ್ಣ ಕಥೆಗಳ ಭಾಷೆ, ನಿರೂಪಣೆ ಶೈಲಿ, ಜೀವನದ ನಿಶ್ಚಳ ಅನುಭವಗಳು ತುಂಬಾ ಸರಳವಾಗಿದ್ದು, ಎಂತಹ ಓದುಗರನ್ನು ತನ್ನೊಳಗೆ ಆವರಿಸಿಕೊಳ್ಳುವಂತೆ ಮಾಸ್ತಿಯವರ ಸಾಹಿತ್ಯ ಹೊಂದಿದೆಯೆಂದರು.
ಕಸಾಪ ಆಳಂದ ವಲಯ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು. ಅವರು ಅದಕ್ಕಿಂತಲೂ ದೊಡ್ಡವರೆಂಬ ನನ್ನ ಭಾವನೆ’ ಎಂದಿರುವ ಮಾತು ಮಾಸ್ತಿಯವರ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ, ಭಾಷೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ನೀಡಿರುವ ಕೊಡುಗೆ ಬಹು ಮೌಲ್ಯಯುತವಾಗಿದೆ. ಅವರೊಬ್ಬ ಕನ್ನಡ ಸಾರಸತ್ವ ಲೋಕದ ಮೇರು ಸಾಹಿತಿಯಾಗಿದ್ದಾರೆಂದು ನುಡಿದರು.
ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ರಾಜಕುಮಾರ ಬಟಗೇರಿ, ಶರಣಬಸಪ್ಪ ಮಲಶೆಟ್ಟಿ, ಮಹಾಂತೇಶ ಬಿ.ಬಿರಾದಾರ, ಗಣೇಶ ಗೌಳಿ, ಓಂಕಾರ ಗೌಳಿ ಇದ್ದರು.