• ಚಿ.ಗೋ ರಮೇಶ್
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪ್ರತಿಭೆ ಪ್ರವೇಶವಾಗಿದೆ. ಅದುವೇ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್. ಕಿಚ್ಚ ಜೂನಿಯರ್ ಎಂದೇ ಪರಿಚಯಿಸಿಕೊಂಡಿರುವ ಯುವ ನಟನನ್ನು ಹಿರಿಯ ನಟರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ , ಸಂಚಿತ್ ಅವರನ್ನು ವೇದಿಕೆ ಕರೆತರುವ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಂಡರು ಶುಭಹಾರೈಸಿದರು.
ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದ ಸಂಚಿತ್ , ತಾತ ಸಂಜೀವ್, ಅಜ್ಜಿ, ಅಮ್ಮ, ದೊಡ್ಡಮ್ಮ ಸೇರಿದಂತೆ ಇಡೀ ಕುಟುಂಬದ ಮುಖದಲ್ಲಿ ಕ್ಷಣ ಕಾಲ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ತಮಗೆ ಅರಿವಿಲ್ಲದೆ ಕಣ್ಣಲ್ಲಿ ಆನಂದ ಭಾಷ್ಪ ಸುರಿಯಿತು.
ನಟ ಸುದೀಪ್ ಸೇರಿದಂತೆ ಅವರ ತಂಡ ಸಂಚಿತ್ ಸಂಜೀವ್‍ಗೆ ಚಿತ್ರರಂಗದಲ್ಲಿ ಒಳ್ಳೆಯದಾಗಲಿ ಎಂದು ಹರಸಿ, ಚಿತ್ರರಂಗಕ್ಕೆ ಬರಮಾಡಿಕೊಂಡರು. ಈ ವೇಳೆ ನಿರ್ದೇಶಕರಾದ ಆರ್.ಚಂದ್ರು, ಅನೂಪ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು,
ಅಂದಹಾಗೆ ಸಂಚಿತ್ ಸಂಜೀವ್ “ಜಿಮ್ಮಿ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆಯಾಗುವ ಜೊತೆಗೆ ತಮ್ಮ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸಂಚಿತ್ ಈ ಸಾಹಸಕ್ಕೆ ಕಿಚ್ಚ ಸುದೀಪ್ ಬೆನ್ನೆಲುಬಾಗಿ ನಿಂತಿದ್ದಾರೆ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಸಂಚಿತ್, ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ಜಿಮ್ಮಿ ಯಾರಿಗೂ ಕಮ್ಮಿ ಇಲ್ಲ ಎಂದರು. ಚಿತ್ರವನ್ನು ಲಹರಿ ವೇಲು, ಕೆಪಿ ಶ್ರೀಕಾಂತ್ ಹಾಗು ಪ್ರಿಯಾ ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ.
ಎಸ್ ಗ್ರೂಪ್‍ಗೆ ಸ್ವಾಗತ
ಸಂಚಿತ್‍ಗೆ ಎಸ್ ಗ್ರೂಪ್‍ಗೆ ಸ್ವಾಗತ. ಎಸ್ ಎಂದರೆ ಶಿವರಾಜ್ ಕುಮಾರ್, ಸುದೀಪ್, ಯಾವಾಗಲು ಯಶಸ್ಸು, ಅದು ನಿನ್ನದಾಗಲಿ, ದೊಡ್ಡ ನಟನಾಗಿ ಬೆಳೆಯಿರಿ. -ಶಿವರಾಜ್ ಕುಮಾರ್, ಹಿರಿಯ ನಟ
ಸೆನ್ಸೇಷನ್ ಕ್ರಿಯೇಟ್ ಮಾಡಿ
ಮೊಟ್ಟ ಮೊದಲ ಚಿತ್ರದಲ್ಲಿಯೇ ನಾಯಕನಾಗುವ ಜೊತೆಗೆ ನಿರ್ದೇಶಕನೂ ಆಗಿದ್ದೀಯ, ಟೀಸರ್ ಬಿಡುಗಡೆ ಮಾಡುವ ಮೂಲಕ ವೈಬ್ರೇಷನ್ ಸೃಷ್ಠಿಯಾಗಿದೆ. ಇನ್ನೂ ಸನ್ಸೇಷನ್ ಸೃಷ್ಠಿ ಮಾಡಬೇಕು. ಕೆಲಸ ಮಾಡಿಕೊಂಡು ಗೆಲುವು ನಿನ್ನದೇ. -ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟ
ಶುಕ್ರವಾರ ಬರಬೇಡ
ನನ್ನ ಚಿತ್ರಗಳು ಬಿಡುಗಡೆಯಾಗುವ ಶುಕ್ರವಾರದಂದು ನೀನು ಬರಬೇಡ. ಇನ್ನುಳಿದಂತೆ ಯಾವಾಗ ಬೇಕಾದರೂ ಬಾ. ಅಡ್ಡಿ ಇಲ್ಲ. ಮಾಧ್ಯಮದ ಮಂದಿಯ ಜೊತೆ ಬೆರೆಯುವುದನ್ನು ಕಲಿತುಕೋ. ಇಂದಿನ ಯುವ ನಟರ ಜೊತೆ ಆಲೋಚನೆ ಹಂಚಿಕೋ,ಒಳ್ಳೆಯ ಸ್ನೇಹ ಸಂಬಂಧ ರೂಢಿಸಿಕೊಳ್ಳುವ ಮೂಲಕ ದೊಡ್ಡ ನಟನಾಗಿ ಎತ್ತರಕ್ಕೆ ಏರು.ಆದರೆ ಎಂದಿಗೂ ಕೂಡ ನಿನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ರವಿಚಂದ್ರನ್. ಶಿವರಾಜ್ ಕುಮಾರ್ ಅವರನ್ನು ಮರಿಬೇಡ. _ ಕಿಚ್ಚ ಸುದೀಪ್, ಹಿರಿಯ ನಟ
ಗಾಯಕಿಯಾಗಿ ಪ್ರವೇಶ
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ “ಜಿಮ್ಮಿ” ಚಿತ್ರದ ಮೂಲಕ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಯವಾಗುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನದಲ್ಲಿ ಹಾಡುವ ಮೂಲಕ ಅಧಿಕೃತವಾಗಿ ಗಾಯಕಿ ಎನ್ನುವ ಶ್ರೇಯ ಪಡೆದುಕೊಂಡಿದ್ದಾರೆ.