ಕನ್ನಡಕ್ಕೆ ಎಂಟು ಜ್ಞಾನ ಪೀಠ ಪ್ರಶಸ್ತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಭಾರತ ಸಂವಿಧಾನ ಅಂಗೀಕರಿಸಿರುವ  ಇಪ್ಪತ್ತೆರಡು ಭಾಷೆಗಳಲ್ಲಿ,ಕನ್ನಡ ಭಾಷೆಯೊಂದರಲ್ಲೇ ಅತಿ ಹೆಚ್ಚು ಅಂದರೆ ಎಂಟುಜನ ಕವಿಗಳು ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಭಾಷೆ ಮಾದರಿ ಭಾಷೆಯೆಂದು ದೇಶದ ಇತರೆ ರಾಜ್ಯಗಳಿಗೆ ತೋರಿಸಿ ಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಇಂದು ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂತೆ,ಸಿಪ್ಪೆ ಸುಲಿದ ಕಬ್ಬಿನಂತೆ ಬೇಗನೆ ಕಲಿಯಬಹುದು ಎಂದು ಹೇಳುವುದರ ಜೊತೆಗೆ ಐಎಎಸ್, ಐಪಿಎಸ್ ಮಾಡಿದ ಉತ್ತರ ಭಾರತದ ಅಧಿಕಾರಿಗಳು ಕರ್ನಾಟಕ ರಾಜ್ಯವನ್ನೇ ಹೆಚ್ಚಾಗಿ ಆಯ್ಕೆಮಾಡಿ ಕೊಳ್ಳುತ್ತಾರೆ ಎಂದರು.
ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಕನ್ನಡ ಶಿಕ್ಷಕಿ ಶ್ವೇತಾ ಮಾಲಾರ್ಪಣೆ ಮಾಡಿದರೆ, ಸುಮತಿ ಪೂಜೆ ನೆರವೇರಿಸಿದರು.
ಶಿಕ್ಷಕರಾದ ದಿಲ್ಷಾದ್ ಬೇಗಂ, ವೈಶಾಲಿ, ಉಮ್ಮೆಹಾನಿ, ಶಶಮ್ಮ, ರಾಮಾಂಜಿನೇಯ, ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.