ಕನ್ನಡಕ್ಕಾಗಿ ಹಗಲಿರುಳು ಸೇವೆಗೆ ಬದ್ಧ: ಜೋಶಿ

ಧಾರವಾಡ ಎ.10: ಕಸಾಪ ಕನ್ನಡಾಭಿಮಾನಿ ಸದಸ್ಯರು ನನಗೆ ಮತ ನೀಡಿ ದಾಖಲೆ ಅಂತರದಿಂದ ಗೆಲ್ಲಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನೋಪಯೋಗಿಯಾಗಿ ಜನಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸುತ್ತೇನೆ.ಇದು ಲಾಭದ ಉದ್ದೇಶ ಹೊಂದಿರುವ ವಾಣಿಜ್ಯ ಚಟುವಟಿಕೆಗಳಿಂದ ಕೂಡಿದ ಸಂಸ್ಥೆಯಲ್ಲ. ಜನೋಪಯೋಗಿ-ಪರಿಷತ್ತನ್ನಾಗಿ ಮಾರ್ಪಾಡಿಸಲು, ಅಜೀವ ಸದಸ್ಯರ ಬಳಗವನ್ನು ಕೇಳಿಕೊಳ್ಳುತ್ತೆನೆ ಎಂದರು.
ಹತ್ತು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದ ಅವರು, ತಮ್ಮ ಜೀವಮಾನದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು ಕನ್ನಡ ಭಾಷೆ-ನೆಲ-ಜಲಕ್ಕಾಗಿ ಹಗಲಿರುಳು ಸೇವೆ ಮಾಡಲು ಬದ್ಧನಿದ್ದೇನೆ ಎಂದರು.
ಮನದ ಮಾತುಗಳು ಮತ್ತು ಮುಕ್ತಭಾವನೆಗಳನೊಳಗೊಂಡ ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‍ಗೆ ನಡೆಯಲಿರುವ ಚುನಾವಣೆ ಸಂಘಟಕನಾಗಿ, ಕನ್ನಡಪರ ಕಾರ್ಯಕರ್ತನಾಗಿ ಎಲ್ಲಕ್ಕಿಂತ ಮಿಗಿಲಾಗಿ, ಕನ್ನಡದ ಪರಿಚಾಲಕನಾಗಿ ನಾನು ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮೆಲ್ಲರ ಸ್ವತ್ತಾಗಿ ಪರಿವರ್ತಿಸಿ, ಜನಸಾಮಾನ್ಯರ ಪರಿಷತ್ ಆಗಿಸುವ ಧೈರ್ಯ ನನ್ನದು ಎಂದರು.
ಎಲ್ಲರೂ ನನಗೆ ಆತ್ಮೀಯವಾಗಿರುವಾಗ, ಯಾರನ್ನು ಭೇಟಿಯಾಗಲಿ, ಯಾರನ್ನು ಬಿಡಲಿ, ಎಂಬ ವಿಶ್ವಾಸದಲ್ಲಿ ಇದ್ದೇನೆ. ಆದರೂ ಸಹ, ನನಗೆ ದೊರೆಯುತ್ತಿರುವ ಅವಧಿಯಲ್ಲಿ, ಸಾಧ್ಯವಾದಷ್ಟು ಹೆಚ್ಚಿನ ಮತದಾರರನ್ನು ಭೇಟಿಯಾಗುವ ಮಹದಾಸೆಯನ್ನು ಹೊಂದಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾ ಜೋಶಿ ಇನ್ನಿತರರು ಉಪಸ್ಥಿತರಿದ್ದರು.