ಕನ್ನಡಕ್ಕಾಗಿ ಶ್ರಮಿಸಿದವರ ಆದರ್ಶ ಪಾಲಿಸೋಣ

ಕೋಲಾರ,ನ.೨: ಕನ್ನಡ ನಾಡು,ನುಡಿಯ ಉಳಿವಿಗಾಗಿ ಅನೇಕರು ಶ್ರಮಿಸಿದ್ದಾರೆ, ಅವರೇ ನಮ್ಮ ಜೀವನದ ಆದರ್ಶವಾಗಬೇಕು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಭಾಷೆ,ನೆಲ,ಜಲ ಸಂರಕ್ಷಣೆಗೆ ಸಂಕಲ್ಪ ತೊಡೋಣ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ತಿಳಿಸಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳು ಕನ್ನಡವನ್ನು ಸ್ವಷ್ಟವಾಗಿ ಓದುವ, ಬರೆಯುವ,ಮಾತನಾಡುವುದನ್ನು ಚೆನ್ನಾಗಿ ಕಲಿತರೆ ಅದೇ ನಾಡು,ನುಡಿಗೆ ನೀಡುವಂತಹ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹೇಂದ್ರ ಮಾತನಾಡಿ, ಕನ್ನಡ ನಾಡಿನ ಏಳ್ಗೆಗಾಗಿ ಶ್ರಮಿಸಿದ ಮಹನೀಯರ ಆದರ್ಶ ಪಾಲಸುವುದು ಅಗತ್ಯ, ಕನ್ನಡ ನಾಡು,ನುಡಿಗೆ ಧಕ್ಕೆ ಬರುವಂತಾದರೆ ಯಾವುದೇ ಹೋರಾಟಕ್ಕೂ ನಾವು ಸಿದ್ದರಾಗಬೇಕೆಂದರು.
ಕನ್ನಡಾಭಿಮಾನ ಈ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ, ಇತರೆ ಭಾಷೆ ಕಲಿಯುವುದು ತಪ್ಪಲ್ಲ ಆದರೆ ತಾಯಿಭಾಷೆಗೆ ನೀಡುವ ಗೌರವಕ್ಕೆ ಚ್ಯುತಿ ಬರಬಾರದು ಎಂದರು.
ಶಿಕ್ಷಕರಾದ ಸಚ್ಚಿದಾನಂದಮೂರ್ತಿ ಕನ್ನಡ ಏಕೀಕರಣಕ್ಕಾಗಿ ನಡೆದ ಹೋರಾಟದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯ ರಾಮಚಂದ್ರಪ್ಪ,ಶಿಕ್ಷಕರಾದ ಭವಾನಿ, ಲೀಲಾ, ಸುಗುಣಾ, ಸಿ.ಎಲ್.ಶ್ರೀನಿವಾಸಲು, ಫರೀದಾ ಮತ್ತಿತರರು ಉಪಸ್ಥಿತರಿದ್ದರು.