ಕನ್ನಡಕ್ಕಾಗಿ ಶ್ರಮಿಸಿದವರನ್ನು ಸ್ಮರಿಸುವ ಕೆಲಸವಾಗಬೇಕು: ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.02: ಕನ್ನಡನಾಡು ಉದಯವಾಗಲು ಶ್ರಮಿಸಿದ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಜಗತ್ತಿಗೆ ಸಾರಿದ ನೂರಾರು ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಇಂದಿನ ಯುವಜನತೆ ಮಾಡಬೇಕಿದೆ ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರಾನಂತರದ ವರ್ಷಗಳಲ್ಲಿ ಭಾಷಾವಾರು ಪ್ರಾಂತ್ಯಗಳು ಅಸ್ತಿತ್ವಕ್ಕೆ ಬಂದ ನಂತರ 1956 ನವಂಬರ್ ಒಂದರಂದು ಕನ್ನಡ ಭಾಷೆಯನ್ನಾಡುವ ಕನ್ನಡಿಗರಿಗಾಗಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಕನ್ನಡದ ಅಸ್ಮಿತೆಯ ಉಳಿವಿಗಾಗಿ 1905 ರಂದಲೂ ಆಲೂರುವೆಂಕಟರಾಯರು ಸೇರಿದಂತೆ ಹಲವರ ಹೋರಾಟಗಳು ಪ್ರತಿಫಲವಾಗಿ 1973 ನವಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಯಿತು. ಅದರ ಸವಿನೆನಪಿಗಾಗಿ ಇಂದು 50ನೇ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯುತ್ತಿದೆ. ಕನ್ನಡಿಗರಾದ ನಾವುಗಳು ಕನ್ನಡ ನಾಡು ನುಡಿ. ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಗ್ಗೂಡಬೇಕು. ಅಚ್ಚ ಕನ್ನಡ ಮಾತನಾಡುವ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಕೆ.ಎಸ್.ನರಸಿಂಸ್ವಾಮಿ. ಅಕ್ಕಿಹೆಬ್ಬಾಳುರಾಮಣ್ಣ, ಎ.ಎನ್.ಮೂರ್ತಿರಾಯರು ಸೇರಿದಂತೆ ತಾಲ್ಲೂಕಿನ ಅನೇಕರು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಹಿಂದಿನವರು ಕಟ್ಟಿ ಬೆಳೆಸಿದ ಈ ನಾಡನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗೋಣ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ. ಕಲಿಯೋಕೆ ನಾನಾ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಎಂಬ ಸಾಲುಗಳು ಕನ್ನಡಿಗರ ಮನ, ಮನೆಗಳಲ್ಲಿ ಮಾತಾಡಲಿ ಎಂದರು.
ತಾಲ್ಲೂಕು ದಂಡಾಧಿಕಾರಿ ನಿಸರ್ಗಪ್ರಿಯ ಮಾತನಾಡಿ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು, ಪ್ರತಿದಿನ ಕನ್ನಡವನ್ನು ಬಳಸುವ ಮೂಲಕ ಬೆಳೆಸುವ ಕೆಲಸ ಮಾಡಬೇಕು. ಜಿ.ಪಿ.ರಾಜರತ್ನಂರವರ ಕನ್ನಡ ಪದಗಳ್ ಪದ್ಯವಾಚನ ಮಾಡಲಾಯಿತು.
ಸಮಾರಂಭದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರನ್ನು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಪರೀಕ್ಷೆಯಲ್ಲಿ ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಅಭಿನಂದಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ತಾಪಂ ಇಓ ಸತೀಶ್, ಪುರಸಭಾ ಸದಸ್ಯರಾದ ಶಾಮಿಯಾನತಿಮ್ಮೇಗೌಡ, ಗಿರೀಶ್, ಇಂದ್ರಾಣಿವಿಶ್ವನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣಚಂದ್ತ ತೇಜಸ್ವಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಪಶುಸಂಗೋಪನೆ ನಿರ್ದೇಶಕ ಡಾ.ದೇವರಾಜು, ಸಿಡಿಪಿಓ ಅರುಣ್‍ಕುಮಾರ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಪುರಸಭಾ ಮುಖ್ಯಾಧಿಕಾರಿ ಜಗರೆಡ್ಡಿ, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್‍ಕುಮಾರ್. ಬಿಸಿಎಂ ಅಧಿಕಾರಿ ವೆಂಕಟೇಶ್, ತೋಟಗಾರಿಕಾ ಸಹನಿರ್ದೇಶಕ ಲೋಕೇಶ್, ಶಾಸಕರ ಆಪ್ತ ಸಹಾಯಕ ಪ್ರತಾಪ್, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಕನ್ನಡ ಅಭಿಮಾನಿಗಳು, ವಿದ್ಯಾರ್ಥಿಗಳು ಹಾಜರಿದ್ದರು.