ಕನ್ನಡಕ್ಕಾಗಿ ನಾವು ಪಣತೊಡಬೇಕು : ಶ್ರುತಿ ಕುಲಕರ್ಣಿ

ಕಲಬುರಗಿ,ನ.30:ಕನ್ನಡದ ಉಳಿವಿಗಾಗಿ ಭಾಷೆಯನ್ನು ನಿತ್ಯ ಬಳಕೆ ಮಾಡಿ ಮನೆಯಿಂದಲೇ ಕನ್ನಡ ಮಾತನಾಡುವ ಪಣತೊಡಬೇಕಾಗಿದೆ ಎಂದು ಚಲನಚಿತ್ರ ನಿರ್ಮಾಪಕಿ ಶ್ರುತಿ ಕುಲಕರ್ಣಿ ಹೇಳಿದರು.
ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರಸಾರವಾದ ‘ಕನ್ನಡಕ್ಕಾಗಿ ನಾವು’ ವಿಶೇಷ ನೇರ ಫೋನ್ ಇನ್ ಕಾರ್ಯಕ್ರಮದ ಸಮಾರೋಪ ಸಮಾರಂಭ 30 ರಂದು ಮಂಗಳವಾರ ಕೇಂದ್ರದಲ್ಲಿ ನಡೆಯಿತು.
ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರುತಿ ಕುಲಕರ್ಣಿ ಅವರು ಕನ್ನಡ ಭಾಷೆ-ಸಂಸ್ಕøತಿ ಬೆಳವಣಿಗೆಗಾಗಿ ಆಕಾಶವಾಣಿ ಕೇಂದ್ರದ ಕೊಡುಗೆ ಅಪಾರ. ಕಳೆದ ಒಂದು ತಿಂಗಳು ಮೂಡಿಬಂದ ‘ಕನ್ನಡಕ್ಕಾಗಿ ನಾವು’ ಕಾರ್ಯಕ್ರಮ ಕೇಳುಗರಲ್ಲಿ ಕನ್ನಡ ಪ್ರೇಮ ಜಾಗೃತಗೊಳಿಸಿದೆ ಅಕ್ಷರಗಳನ್ನು ನೀಡಿ ಅದಕ್ಕೆ ಪದಗಳನ್ನು ಹುಡುಕುವ ಮತ್ತು ಕನ್ನಡ ಹಾಡು ಕೇಳುವ ಈ ವಿನೂತನ ಕಾರ್ಯಕ್ರಮ ನನ್ನನ್ನು ಕೂಡಾ ಆಕರ್ಷಿಸಿ ಕೇಳುಗಳನ್ನಾಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಒಂದು ಮಾಧ್ಯಮವಾಗಿ ಆಕಾಶವಾಣಿಯ ಸಾರ್ಥಕ ಕೆಲಸ ಇದಾಗಿದ್ದು ಕನ್ನಡ ನೆಲದಲ್ಲಿರುವ ನಾವೆಲ್ಲ ಕನ್ನಡ ನಾಡು ನುಡಿಗಾಗಿ ಅರ್ಪಣಾ ಮನೋಭಾವದಿಂದ ದುಡಿದರೆ ಮಾತ್ರ ಕನ್ನಡ ಉಳಿದು ಬೆಳೆಯಲು ಸಾಧ್ಯ. ಕನ್ನಡ ಭಾಷೆ ಬೆಳೆಯಬೇಕಾದರೆ ಮನೆಮನೆಗಳಲ್ಲಿ ಮಾತಾಡುವ ಮತ್ತು ಕನ್ನಡ ಸಂಸ್ಕøತಿಯಲ್ಲಿ ಬದುಕುವ ಪರಿಪಾಠ ಬೆಳೆಸುವುದರೊಂದಿಗೆ ಒಟ್ಟಾಗಿ ಪಣತೊಡಬೇಕಾದ ಕಾಲ ಸನ್ನಿಹಿತ ಆಗಿದೆ. ಇದು ಎಲ್ಲರಿಗೂ ಪ್ರೇರಣೆ ಆಗಲಿ ಎಂದು ಶ್ರುತಿ ಕುಲಕರ್ಣಿ ಹೇಳದರು.
ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಮತ್ತು ಉದ್ಘೋಷಕರಾದ ಶಾರದಾ ಜಂಬಲದಿನ್ನಿ ನಿರ್ವಹಿಸಿದರು. ಸಂಗಮೇಶ್, ನೀರಜಾ ಕಾರಟಗಿ ಮತ್ತು ಈಶ್ವರ್, ನಿರ್ಮಲಾ ನಾಯಕ್ ಮತ್ತಿತರರಿದ್ದರು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಅನಿಲ್ ಕುಮಾರ್ ಎಚ್. ಎನ್. ತಿಳಿಸಿದ್ದಾರೆ.