ಕನ್ನಗಳವು ಕುಖ್ಯಾತ ರೌಡಿ ಸೆರೆ

ಬೆಂಗಳೂರು, ಏ.೧೬-ಮೋಜಿನ ಜೀವನಕ್ಕಾಗಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಕುಖ್ಯಾತ ರೌಡಿ ಮತ್ತವನ ಸಹಚರ ಸೇರಿ ಇಬ್ಬರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ರಾಮಮೂರ್ತಿ ನಗರ ಪೊಲೀಸರು ೧೫ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಕುಖ್ಯಾತ ರೌಡಿ ಶ್ರೀನಿವಾಸ್ ಹಾಗೂ ಆತನ ಸಹಚರ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದು,ಇಬ್ಬರಿಂದ ೨೦೫ ಗ್ರಾಂ ಚಿನ್ನಾಭರಣಗಳು, ಸುಜುಕಿ ಸ್ಕೂಟರ್ ಸೇರಿ ೧೫ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳ ಬಂಧನದಿಂದ ರಾಮಮೂರ್ತಿ ನಗರ ೧ ಕನ್ನ ಕಳವು, ಕೆ.ಆರ್ ಪುರಂ ಪೊಲೀಸ್ ಠಾಣೆಯ-೩ ಸೇರಿದಂತೆ ಒಟ್ಟು ೪ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಕಳೆದ ಮಾ.೨೩ ರ ರಾತ್ರಿ ರಾಮಮೂರ್ತಿ ನಗರದ ಮದಕರಿ ನಾಯಕ ರಸ್ತೆಯ ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನದ ಆಭರಣಗಳನ್ನು ಕಳವು ಮಾಡಲು ಪ್ರಯತ್ನಿಸಿದ್ದು, ಮನೆಯಲ್ಲಿ ಯಾವುದೇ ಚಿನ್ನದ ಆಭರಣಗಳು ಪತ್ತೆಯಾಗಿರುವುದಿಲ್ಲ ಈ ಬಗ್ಗೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿ ಪೊಲೀಸರು, ಕೃತ್ಯ ನಡೆದ ಸ್ಥಳಕ್ಕೆ ಬೆರಳು ಮುದ್ರೆ ತಜ್ಞರನ್ನು ಕರೆಸಿದ್ದು, ಸ್ಥಳದಲ್ಲಿ ದೊರೆತ ಬೆರಳು ಮುದ್ರೆಗಳು ಓರ್ವ ಆರೋಪಿಗೆ ಹೋಲಿಕೆಯಾಗಿರುವುದಾಗಿ ವರದಿಯನ್ನು ನೀಡಿರುತ್ತಾರೆ.
ಬೆರಳು ಮುದ್ರೆ ಘಟಕದವರು ನೀಡಿದ ಮಾಹಿತಿಯನ್ನು ಆಧರಿಸಿ ರಾಮಮೂರ್ತಿನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ದಾವಣಗೆರೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಓರ್ವ ಆರೋಪಿಯು ಯಶವಂತಪುರ ಪೊಲೀಸ್ ಠಾಣಾ ರೌಡಿ ಶೀಟರ್ ಆಗಿರುತ್ತಾನೆ. ಈತನ ವಿರುದ್ಧ ೨೦ ಕ್ಕೂ ಹೆಚ್ಚು ಕನ್ನ ಕಳವು ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಮತ್ತೋರ್ವ ಆರೋಪಿಯು ಈತನ ಸಹಚರನಾಗಿರುತ್ತಾನೆ ಎಂದರು.
ಬಂಧಿತರು ಮೋಜಿನ ಜೀವನಕ್ಕಾಗಿ, ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳುವ ಸಲುವಾಗಿ, ಗೇಟ್/ಬಾಗಿಲು ಗಳಿಗೆ ಬೀಗ ಹಾಕಿದ ಮನೆಗಳನ್ನು ಗುರ್ತಿಸಿ, ನಂತರ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳು,ಬೆಲೆ ಬಾಳುವ ದುಬಾರಿ ವಸ್ತುಗಳನ್ನು ಕಳವು ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ನಿರ್ದೇಶನದಲ್ಲಿ ರಾಮಮೂರ್ತಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಮುತ್ತುರಾಜ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.