ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಕೆಲಸಕ್ಕೆ ಬಹಿಷ್ಠಾರ: ದ್ವಿಚಕ್ರವಾಹನಗಳ ಜಾಥಾ

ಕಲಬುರಗಿ,ಜು.20:ಕಟ್ಟಡ ಕಾರ್ಮಿಕರ ವೇತನವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಗುರುವಾರ ಹಾಗೂ ಶುಕ್ರವಾರ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸುವರು ಹಾಗೂ ಜುಲೈ 22ರಂದು ನಗರದ ಗಂಜ್ ಪ್ರದೇಶದ ನಗರೇಶ್ವರ್ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ದ್ವಿಚಕ್ರವಾಹನಗಳ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾಯ್ ಎಂ. ಕಂದಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಇರುವ ವೇತನವನ್ನು ಈಗಲೂ ಸಹ ಮುಂದುವರೆಸಲಾಗಿದೆ. ಕಟ್ಟಡದ ಪ್ರತಿ ಚದುರ ಅಡಿಗೆ 160ರೂ.ಗಳನ್ನು ಕೊಡಲಾಗುತ್ತದೆ. ಆದಾಗ್ಯೂ, ಕಾರ್ಮಿಕರಿಗೆ ಮಾತ್ರ ದಿನಗೂಲಿಯಂತೆ 600ರೂ.ಗಳನ್ನು ಕೊಡಲಾಗುತ್ತಿದೆ. ಇದರಿಂದಾಗಿ ಕಟ್ಟಡ ಕಾರ್ಮಿಕರ ಜೀವನ ನಿರ್ವಹಣೆಯು ಸಂಕಷ್ಟಕ್ಕೆ ಒಳಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರಿಗೆ ಅವರ ಶ್ರಮಕ್ಕೆ ತಕ್ಕಂತೆ ಪ್ರಸ್ತುತ ಎಲ್ಲ ದರಗಳೊಂದಿಗೆ ತುಲನಾತ್ಮಕವಾಗಿ ನೋಡಿ ಕಟ್ಟಡ ಕಾರ್ಮಿಕರ ದರ ಹೆಚ್ಚಿಸಲು ಜಿಲ್ಲಾಧಿಕಾರಿಗಳು, ಎಂಜನಿಯರಿಂಗ್ ಗುತ್ತಿಗೆದಾರರು, ಸಂಘಗಳೊಂದಿಗೆ ಅನೇಕ ಸಮಾಲೋಚನಾ ಸಭೆಗಳನ್ನು ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಆಹಾರ ಧಾನ್ಯಗಳು, ಮಜ್ಜಿಗೆ, ಹಾಲಿನ ಉತ್ಪನ್ನಗಳ ಮೇಲೂ ಸಹ ಜಿಎಸ್‍ಟಿ ವಿಧಿಸಲಾಗಿದೆ. ಎರಡೂ ಬೆಲೆ ಏರಿಕೆಗಳಿಂದ ದಿನಬಳಕೆಯ ವಸ್ತುಗಳ ಬೆಲೆಗಳನ್ನು ಕೊಳ್ಳುವಲ್ಲಿ ಕಟ್ಟಡ ಕಾರ್ಮಿಕರು ಅಸಹಾಯಕರಾಗಿದ್ದಾರೆ. ಆದ್ದರಿಂದ ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ. ಸುಮಾರು 2.80,000 ಕಟ್ಟಡ ಕಾರ್ಮಿಕರಿದ್ದಾರೆ. ಜಿಲ್ಲೆಯಲ್ಲಿ 80,000 ಕಟ್ಟಡ ಕಾರ್ಮಿಕರಿದ್ದಾರೆ. ಗೌಂಡಿ ಕಾರ್ಮಿಕರು, ಕಾರ್ಪೆಂಟರ್ ಕೆಲಸಗಾರರು, ಫರ್ನಿಚರ್ ಕೆಲಸಗಾರರು, ಪೇಂಟಿಂಗ್ ಕೆಲಸಗಾರರು, ಗ್ರಾನೈಟ್ ಕೆಲಸಗಾರರು, ಸೆಂಟ್ರಿಂಗ್ ಕೆಲಸಗಾರರು, ಪ್ಲಂಬರ್ ಕೆಲಸಗಾರರು, ವೆಲ್ಡಿಂಗ್ ಕೆಲಸಗಾರರು, ಕಲ್ಲು ಕೆತ್ತುವ ಕೆಲಸಗಾರರು, ಇಟ್ಟಿಗೆ ಬಟ್ಟಿಯ ಕೆಲಸಗಾರರು, ಪಿಒಪಿ ಕೆಲಸಗಾರರು, ಗ್ಯಾಸ್ ಕೆಲಸಗಾರರು, ಪಾಯಾ ತೋಡುವ ಕೆಲಸಗಾರರು, ಎಲೆಕ್ಟ್ರಿಷಿಯನ್ ಕೆಲಸಗಾರರು, ಗಾರ್ಡನ್ ಕೆಲಸಗಾರರು ಸೇರಿದಂತೆ ಎಲ್ಲ ಕಟ್ಟಡ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೆಂಟ್ರಿಂಗ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅಲ್ಲಾಹುದ್ದೀನ್, ಶಿವಕುಮಾರ್ ಎಸ್. ಬೇಳಗಂದಿ, ಮಹಾಂತೇಶ್ ಎಸ್. ದೊಡ್ಡಮನಿ, ಮರೆಪ್ಪ ಎಸ್. ರೊಟ್ಟನಡಗಿ ಮುಂತಾದವರು ಉಪಸ್ಥಿತರಿದ್ರು.