ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಗ್ರಾ.ಪಂ. ನೌಕರರ ಪ್ರತಿಭಟನೆ

ತುಮಕೂರು, ಜು. ೧೫- ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಸೂಚಿತ ಉದ್ದಿಮೆಗಳಿಗೆ ಅನ್ವಯವಾಗುವಂತೆ ಸರ್ಕಾರ ಓರ್ವ ದುಡಿಯುವ ವ್ಯಕ್ತಿಗೆ ೩ ಬಳಕೆಯ ಯುನಿಟ್‌ಗಳು, ಸರಳ ಚಟುವಟಿಕೆ ನಡೆಸುವ ಸರಾಸರಿ ಭಾರತೀಯ ವಯಸ್ಕರಿಗೆ ಡಾ. ಅಕ್ರಾಯ್ಡ್ ಶಿಫಾರಸ್ಸು ಮಾಡಿರುವ ರೀತಿಯಲ್ಲಿ ೨೭೦೦ ಕ್ಯಾಲೋರಿ ನಿವ್ವಳ ಆಹಾರ ಸೇವನೆಯು ಕನಿಷ್ಠ ಆಹಾರ ಅವಶ್ಯಕತೆಯಾಗಬೇಕು, ವರ್ಷಕ್ಕೆ ೭೨ ಯಾರ್ಡ್ (ಗಜ) ಬಟ್ಟೆ ಅವಶ್ಯಕತೆ, ಸರ್ಕಾರದ ಕೈಗಾರಿಕ ಪ್ರದೇಶ ಗೃಹ ಯೋಜನೆಗೆ ಪೂರಕವಾಗಿ ಬಾಡಿಗೆ, ಒಟ್ಟು ಕನಿಷ್ಠ ವೇತನದ ಶೇ. ೨೦ ರಷ್ಟು ಪ್ರಮಾಣ ಇಂಧನ ಬೆಳಕು ಮತ್ತಿತರ ವಸ್ತುಗಳಿಗೆ ಆಗಬೇಕು, ಶಿಕ್ಷಣ ವೆಚ್ಚ, ವೈದ್ಯಕೀಯ ಅಗತ್ಯ, ಹಬ್ಬಗಳು, ಆಚರಣೆಗಳು ಒಳಗೊಂಡು ಕನಿಷ್ಠ ಮನೋರಂಜನೆ ಮತ್ತು ವೃದ್ದಾಪ್ಯ, ಮದುವೆ ಇತ್ಯಾದಿಗಳಿಗೆ ಕೂಡಿಡುವುದಕ್ಕೆ ಒಟ್ಟು ಕನಿಷ್ಠ ವೇತನದಲ್ಲಿ ಶೇ. ೨೫ ರಷ್ಟು ಪ್ರಮಾಣ ಹೊಂದಿರುವಂತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಕೋಟೆ ಆಂಜನೇಯ ದೇವಸ್ಥಾನ ಬಳಿಯಿಂದ ಮೆರವಣಿಗೆ ಮೂಲಕ ಕಾರ್ಮಿಕ ಇಲಾಖೆ ಕಚೇರಿವರೆಗೆ ತೆರಳಿದ ಪ್ರತಿಭಟನಾಕಾರರು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕೆಲಸಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಜೀವನಾವಶ್ಯಕತೆಯ ಆಧಾರದಲ್ಲಿ ಕನಿಷ್ಠ ವೇತನ ನಿಗದಿಪಡಿಸಲು ಸರ್ವೋಚ್ಛ ನ್ಯಾಯಾಲಯವು ರೆಫ್ತಕೋಸ್ ಬ್ರೆಟ್ ವಿವಾದದಲ್ಲಿ ನೀಡಿದ ತೀರ್ಪಿನ ಆದೇಶದ ಆಧಾರದಲ್ಲಿ ಕನಿಷ್ಠ ವೇತನವನ್ನು ಲೆಕ್ಕ ಹಾಕಲು ಇರುವ ಶಾಸನ ಬದ್ಧ ಅಂಶಗಳ ಆಧಾರದಲ್ಲಿ ನೀಡಬೇಕು. ಆದರೆ ಸರ್ಕಾರಗಳು ದುಡಿಯುವ ನೌಕರರಿಗೆ ಪರಿಷ್ಕರಣೆ ಮಾಡುವಾಗ ಬೆಲೆ ಏರಿಕೆಗನುಗುಣವಾಗಿ ಮತ್ತು ವೈಜ್ಞಾನಿಕವಾಗಿ ಮಾಡದೆ ಕಾಟಾಚಾರಕ್ಕೆ ಸಲ್ಪ ಹೆಚ್ಚಳ ಮಾಡುವ ಮೂಲಕ ನೌಕರರಿಗೆ ಅನ್ಯಾಯ ವೆಸಗುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ನಾಗೇಶ್ ಮಾತನಾಡಿ, ಗ್ರಾಮ ಪಂಚಾಯ್ತಿಗಳಲ್ಲಿ ೨೦೧೬ ರಿಂದ ಬಾಕಿ ಇರುವ ವೇತನ ನೀಡಬೇಕು. ನೀಡದೆ ಇರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಗ್ರಾಮ ಪಂಚಾಯ್ತಿಗಳಲ್ಲಿ ದುಡಿದು ನಿವೃತ್ತಿಯಾದ ನೌಕರರಿಗೆ ಉಪಧನ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಅವರು, ಯಾವ ಪಂಚಾಯ್ತಿಗಳಾಗಲಿ ಸರ್ಕಾರ ನಿಗದಿ ಮಾಡಿದ ವೇತನ ನೀಡದೆ ಇದ್ದರೆ ತಾವುಗಳು ಲಿಖಿತ ರೂಪದಲ್ಲಿ ನೀಡಿದರೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಪಂಚಾಕ್ಷರಯ್ಯ, ನಾರಾಯಣಪ್ಪ, ಚಿ.ನಾ.ಹಳ್ಳಿ ಶಂಕರಪ್ಪ, ರವಿ, ತಿಪಟೂರು ರಾಜು, ಗುಬ್ಬಿಯ ಬಷೀರ, ಸಿರಾ ತಾಲ್ಲೂಕಿನ ಜಗನ್ನಾಥ್, ಪಾವಗಡದ ಸುಬ್ರಾಯಪ್ಪ, ತುರುವೇಕೆರೆಯ ರಮೇಶ್, ಕುಣಿಗಲ್ ಸತೀಶ್, ಕೆಂಪರಾಜು ಮತ್ತಿತರರು ಭಾಗವಹಿಸಿದ್ದರು.