ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ

ನವದೆಹಲಿ, ಜೂ.9- ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಶೇಕಡ 50 ರಿಂದ 62 ರವರೆಗೆ ಕನಿಷ್ಠ ಬೆಂಬಲ ಬೆಲೆ – ಎಂಎಸ್ ಪಿ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧಾರ ತೆಗೆದುಕೊಂಡಿದೆ.

ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ರೈತರಿಗೆ ಮುಂಗಾರು ಹಂಗಾಮು ಮತ್ತು ಬೇಸಿಗೆಯಲ್ಲಿ ಬೆಳೆದ ಬೆಳೆಗಳಿಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು ಸಹಕಾರಿಯಾಗಲಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆ ರದ್ದು ಮಾಡಬಾರದು ಎಂದು ಆಗ್ರಹಿಸಿ ಕಳೆದ ಎಂಟು ತಿಂಗಳಿಗೂ ಹೆಚ್ಚು ಸಮಯದಿಂದ ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಅದರ ನಡುವೆ ಕೇಂದ್ರ ಸರಕಾರ ವಿವಿಧ ಬೆಳೆಗಳಿಗೆ ಶೇಕಡಾ 50 ರಿಂದ 62 ರ ತನಕ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ.

ಆಹಾರ ನಿಗಮಗಳ ಮೂಲಕ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಅದನ್ನು ಪಡಿತರ ವಿತರಣೆಯಲ್ಲಿ ವಿತರಿಸಲು ಕೂಡ ಸೂಚನೆ ನೀಡಿದೆ. ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಅನ್ವಯವಾಗುವಂತೆ ವರ್ಷಕ್ಕೆ ಎರಡು ಬಾರಿ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಲಿದ್ದು ಈ ಬಾರಿ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿದೆ.

2021-22 ರಲ್ಲಿ ದೇಶದಲ್ಲಿ 56.50 ಲಕ್ಷ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೆರವಿಗೆ ಬರಲಿದೆ.

36.87 ಲಕ್ಷ ಹೆಕ್ಟೇರ್

ದೇಶದಲ್ಲಿ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ 36.87 ಲಕ್ಷ ಎಕರೆ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕೆಲಸ ಆರಂಭವಾಗಿದೆ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ.

ಕರ್ನಾಟಕ, ಮಹಾರಾಷ್ಟ್ರ ಒರಿಸ್ಸಾ ತೆಲಂಗಾಣ ಅಸ್ಸಾಂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಅನುಕೂಲ ಸಿಗಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.