ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನುರೂಪಿಸಲು ಒತ್ತಾಯಿಸಿ 30ರಂದು ಧರಣಿ

ಕಲಬುರಗಿ ಜು 28: ದೇಶಾದ್ಯಂತ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ರೂಪಿಸುವಂತೆ ಒತ್ತಾಯಿಸಿ ಇದೇ ಜುಲೈ 30ರಂದು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ನಗರದ ಎಸ್.ವಿ.ಪಿ ವೃತ್ತದಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. 13 ತಿಂಗಳು ದೇಶಾದ್ಯಂತ ರೈತರು ಹೋರಾಟ ಕೈಗೊಂಡಿದ್ದರಿಂದ ಬೆದರಿದ ಕೇಂದ್ರ ಸರಕಾರ ತಾನು ಜಾರಿಗೆ ತಂದಿದ್ದ ಮೂರು ರೈತವಿರೋಧಿ ಕಾನೂನುಗಳನ್ನು ಹಿಂಪಡೆಯುವ ವೇಳೆ ಬೆಂಬಲ ಬೆಲೆ ಖಾತ್ರಿ ಕಾನೂನು ರೂಪಿಸುವ ಭರವಸೆ ನೀಡಿತ್ತು. ಅದೇ ಭರವಸೆಯ ಆಧಾರದ ಮೇಲೆ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಗೆಲ್ಲುವ ಹಾದಿ ಸುಗಮ ಮಾಡಿಕೊಂಡಿತು. ಇದಾದ ಬಳಿಕ ಈವರೆಗೆ ಬೆಂಬಲ ಬೆಲೆ ಖಾತ್ರಿ ಕಾನೂನು ರೂಪಿಸುವ ಕುರಿತು ಕೇಂದ್ರ ಸರಕಾರ ತುಟಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರು.
ರೈತರ ಹೋರಾಟದ ಸಂದರ್ಭದಲ್ಲಿ ದೇಶಾದ್ಯಂತ 700 ರೈತರು ಸಾವನ್ನಪ್ಪಿದ್ದಾರೆ. ಈ ರೈತರ ಸಂತ್ರಸ್ತ ಕುಟುಂಬಗಳಿಗೆ ಈವರೆಗೆ ಪರಿಹಾರ ನೀಡಿಲ್ಲ. ಮೇಲಾಗಿ, ಆಗ ರೈತರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಇನ್ನೂ ಹಿಂಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ದೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾನೂನು ಹಿಂಪಡೆಯಲಾಗಿದೆ. ಆದರೆ, ಈ ಕಾನೂನು ಕರ್ನಾಟಕದಲ್ಲಿ ಇನ್ನೂ ಜಾರಿಯಲ್ಲಿದೆ. ಆ ಮೂಲಕ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ನಿಷ್ಕ್ರಿಯಗೊಳಿಸುವ ಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ. ಕಾಯ್ದೆಯ 79 ಎ ಮತ್ತು ಬಿ ಸೆಕ್ಷನ್ ಗೆ ತಿದ್ದುಪಡಿ ತರುವ ಮೂಲಕ ಪುನಃ ರಾಜ್ಯದಲ್ಲಿ ಜಮೀನ್ದಾರಿ ಪದ್ಧತಿ ಜಾರಿಗೆ ತರಲು ಸರಕಾರ ಯತ್ನಿಸುತ್ತಿದೆ ಎಂದು ಪಾಟೀಲ್ ದಿಗ್ಭ್ರಾಂತಿ ಸೂಚಿಸಿದರು.
ರೈತ ಹಾಗೂ ಕಾರ್ಮಿಕ ಮುಖಂಡರಾದ ಎಂ.ಬಿ.ಸಜ್ಜನ್, ನಾಗೇಂದ್ರಪ್ಪ ಥಂಬೆ, ಜನವಾದಿ ಸಂಘಟನೆಯ ಪದ್ಮಿನಿ ಕಿರಣಗಿ, ಉಮಾಪತಿ ಪಾಟೀಲ್, ಜಾವೇದ್ ಹುಸೇನ್ ಹಾಗೂ ರೇವಣಸಿದ್ದಪ್ಪ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.


ಶಾಸಕರು, ಸಂಸದರು ಹಾಗೂ ಸಚಿವರ ವೇತನ ಹೆಚ್ಚಳ ಮಾಡುವಲ್ಲಿ ತೋರಿಸುವ ಮುತುವರ್ಜಿಯನ್ನು ಬೆಂಬಲ ಬೆಲೆ ಖಾತ್ರಿ ಕಾನೂನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೋರುತ್ತಿಲ್ಲ. ಇದು ವಿಷಾದನೀಯ.
-ಶರಣಬಸಪ್ಪ ಮಮಶೆಟ್ಟಿ
**

ಎಪಿಎಂಸಿ ಮೂಲಕ ರೈತರಿಗೆ ನ್ಯಾಯ ಕಲ್ಪಿಸಬೇಕಾದ ರಾಜ್ಯ ಮತ್ತು ಕೇಂದ್ರ ಸರಕಾರ ಆ ನಿಟ್ಟಿನಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿವೆ. ಹೊರಗೊಂದು ದರ, ಒಳಗೊಂದು ದರ ಅನುಸರಿಸುವ ತಾರತಮ್ಯ ನೀತಿ ಕೈ ಬಿಡಬೇಕು.

  • ಮೌಲಾಮುಲ್ಲಾ
    ಅಖಿಲ ಭಾರತ ಕಿಸಾನ್ ಸಭಾ
    **

ಕೇಂದ್ರ ಸರಕಾರ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿ.ಎಸ್.ಟಿ ವಿಧಿಸಿದೆ. ಇನ್ನೊಂದೆಡೆ ರಾಜ್ಯ ಸರಕಾರ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿದೆ. ಒಟ್ಟಾರೆ ಜನವಿರೋಧಿ ನೀತಿಯ ಮೂಲಕ ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ.
-ಕಾಮ್ರೇಡ್ ಮಹೇಶ್