ಕನಿಷ್ಠ ಬೆಂಬಲಬೆಲೆ ಖಾತರಿ ಕಾನೂನಿಗೆ ಆಗ್ರಹಿಸಿ ಧರಣಿ

ಕಲಬುರಗಿ ಜು 30 : ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ರೂಪಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಇಂದು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಧರಣಿ ನಡೆಸಲಾಯಿತು.ಸಮಿತಿಯ ರಾಜ್ಯ ನಾಯಕರಾದ ಬಿ.ಆರ್ ಪಾಟೀಲ ಅವರು ಮಾತನಾಡಿ ರೈತರು ದೇಶಾದ್ಯಂತ ಹೋರಾಟ ಕೈಗೊಂಡಿದ್ದರಿಂದ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವೇಳೆ ಬೆಂಬಲ ಬೆಲೆ ಖಾತ್ರಿ ಕಾನೂನು ರೂಪಿಸುವ ಭರವಸೆ ನೀಡಿತ್ತು.ಈವರೆಗೆ ಬೆಂಬಲ ಬೆಲೆ ಖಾತ್ರಿ ಕಾನೂನು ರೂಪಿಸುವ ಕುರಿತು ಕೇಂದ್ರ ಸರಕಾರ ಚಕಾರವೆತ್ತುತ್ತಿಲ್ಲ.ರೈತರ ಹೋರಾಟದ ಸಂದರ್ಭದಲ್ಲಿ ದೇಶಾದ್ಯಂತ 700 ರೈತರು ಸಾವನ್ನಪ್ಪಿದ್ದಾರೆ. ರೈತಸಂತ್ರಸ್ತ ಕುಟುಂಬಗಳಿಗೆ ಈವರೆಗೆ ಪರಿಹಾರ ನೀಡಿಲ್ಲ. ಆಗ ರೈತರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಇನ್ನೂ ಹಿಂಪಡೆದಿಲ್ಲ.ಇಡೀ ದೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾನೂನು ಹಿಂಪಡೆಯಲಾಗಿದ್ದರೂ, ಕರ್ನಾಟಕದಲ್ಲಿ ಇನ್ನೂ ಜಾರಿಯಲ್ಲಿದೆ. ಆ ಮೂಲಕ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಶರಣಬಸಪ್ಪ ಮಮಶೆಟ್ಟಿ,ಉಮಾಪತಿ ಮಾಲಿ ಪಾಟೀಲ,ಮಹೇಶ ಎಸ್ ಬಿ,ಮೌಲಾಮುಲ್ಲಾ, ನಾಗೇಂದ್ರಪ್ಪ ಥಂಬೆ,ಅರ್ಜುನ ಗೊಬ್ಬೂರ ಸೇರಿದಂತೆ ಹಲವರು ಪಾಲ್ಗೊಂಡರು.