ಕನಸಿನ ಕೋಲಾರ ಅಭಿವೃದ್ದಿಗೆ ಜೆಡಿಎಸ್ ಅಧಿಕಾರಕ್ಕೆ ತನ್ನಿ-ಗೋವಿಂದರಾಜು

ಕೋಲಾರ,ಮಾ,೨೨- ಶಾಸಕರ ಕ್ಷೇತ್ರಾಭಿವೃದ್ದಿ ನಿಧಿ,ಬಯಲು ಸೀಮೆ ಅಭಿವೃದ್ದಿ ನಿಗಮದಿಂದ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕಿ ವಿವಿಧ ಯೋಜನೆಗಳಡಿ ನಾನು ಶಾಸಕನಾದ ೨ ವರ್ಷ ೯ ತಿಂಗಳಲ್ಲಿ ೩೬.೩೮ ಕೋಟಿ ರೂ ಅನುದಾನವನ್ನು ಕೋಲಾರ ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ತಂದಿರುವುದಾಗಿ ವಿಧಾನಪರಿಷತ್ ಜೆಡಿಎಸ್ ಶಾಸಕ ಇಂಚರ ಗೋವಿಂದರಾಜು ತಿಳಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಹಳೆಯ ಸಂವತ್ಸರ ಇಂದಿಗೆ ಮುಗಿಯಲಿದ್ದು, ನಾಳೆಯಿಂದ ಶೋಭಕೃತ್ ನಾಮ ಹೊಸ ಸಂವತ್ಸರ ಬರುತ್ತಿದ್ದು, ಹೊಸ ವರ್ಷದಲ್ಲಿ ಜಿಲ್ಲೆಯ ಜನತೆಗೆ ಸುಖಶಾಂತಿ ಸಿಗಲಿ, ಜನಪರವಾದ ಹೊಸ ಸರ್ಕಾರ ರಚನೆಯಾಗಲಿ ಎಂದು ಆಶಿಸಿದರು.
ನನ್ನ ಕನಸಿನ ಕೋಲಾರದ ಅಭಿವೃದ್ದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದ ಅವರು, ಕೋಲಾರ ಕೆರೆಯನ್ನು ಪ್ರವಾಸಿ ತಾಣವಾಗಿಸಲು ೧೪ ಕೋಟಿ ವೆಚ್ಚದ ಯೋಜನೆ ರೂಪಿಸಿದ್ದೇನೆ, ಕೆರೆಯ ಮಧ್ಯೆ ಸುಂದರವಾದ ೩ ದ್ವೀಪಗಳ ನಿರ್ಮಾಣ, ಬೋಟಿಂಗ್ ವ್ಯವಸ್ಥೆ, ರೆಸ್ಟೋರೆಂಟ್ ನಿರ್ಮಾಣದ ಗುರಿ ಇದೆ, ನಗರದ ಎಲ್ಲಾ ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿಸಿ, ಮಧ್ಯೆ ಸುಂದರ ದೀಪಗಳ ಅಳವಡಿಕೆ ಮೂಲಕ ಕೋಲಾರದ ಅಂದ ಹೆಚ್ಚಿಸಬೇಕಿದೆ ಎಂದರು.
ಹೆಚ್‌ಡಿಕೆ ಅವಧಿಯಲ್ಲಿ ಬಿಡುಗಡೆಯಾಗಿ ವಾಪಸ್ಸಾಗಿದ್ದ ೫ ಕೋಟಿ ಅನುದಾನ ಮರು ಬಿಡುಗಡೆ ಮಾಡಿಸಿದ್ದೇನೆ, ಪ್ರವಾಸಿ ತಾಣವಾದ ಅಂತರಗಂಗೆ ರಸ್ತೆ ಅಭಿವೃದ್ದಿಗೆ ೫೦ ಲಕ್ಷ ಬಿಡುಗಡೆ ಮಾಡಿ, ಇನ್ನೂ ಹೆಚ್ಚುವರಿಯಾಗಿ ೧ ಕೋಟಿ ರೂ ಬಿಡುಗಡೆಗೆ ಮನವಿ ಮಾಡಿದ್ದೇನೆ ಎಮದ ಅವರು,ತಾಲ್ಲೂಕಿನ ವಿವಿಧೆಡೆ ೮ ಹೈಮಾಸ್ಕ್ ಲೈಟ್ ಅಳವಡಿಕೆಗೂ ೩೨.೫೨ ಲಕ್ಷ ನೀಡಿರುವುದಾಗಿ ತಿಳಿಸಿದರು.
ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಮಹಿಳಾ,ಮಕ್ಕಳ ಚಿಕಿತ್ಸಾ ಘಟಕದಲ್ಲಿ ವಿಶೇಷ ಕೊಠಡಿಗಳ ನಿರ್ಮಾಣಕ್ಕೆ ೭೦ ಲಕ್ಷ, ಪೇಟೆ ಚಾಮನಹಳ್ಳಿ ಸರ್ಕಾರಿ ಶಾಲೆ ೨ ಕೊಠಡಿಗಳಿಗೆ ಬಯಲು ಸೀಮೆ ಅಭಿವೃದ್ದಿ ನಿಗಮದಿಂದ ೩೦ ಲಕ್ಷ ರೂ,ನಗರದ ನೂತನ ಸರ್ಕಾರಿ ಪ್ರೌಢಶಾಲೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ೧ ಕೋಟಿ ರೂ ಹಾಗೂ ಶಿಕ್ಷಣ ಸಚಿವರಿಗೆ ಒತ್ತಡ ಹಾಕಿ ಹೆಚ್ಚುವರಿಯಾಗಿ ೨೦ ಲಕ್ಷ ಬಿಡುಗಡೆ ಮಾಡಿಸಿದ್ದು, ಮಾ.೨೫ರ ಶನಿವಾರ ಶಿಲಾನ್ಯಾಸ ನಡೆಸುತ್ತಿರುವುದಾಗಿ ತಿಳಿಸಿದರು.
ಚೌಡೇಶ್ವರಿ ನಗರ ಸಿಸಿ ರಸ್ತೆಗೆ ೭೦ ಲಕ್ಷ ರೂ, ಶಿಳ್ಳಂಗೆರೆ-ಮಲ್ಲಂಡಳ್ಳಿ ರಸ್ತೆಗೆ ೩೦ ಲಕ್ಷ ರೂ, ಗ್ರಾಮೀಣ ಎಸ್ಸಿಎಸ್ಟಿ ಕಾಲೋನಿಗಳಲ್ಲಿ ಹೈಮಾಸ್ಕ್ ದೀಪಗಲಿಗೆ ೩೦ ಲಕ್ಷ, ಪ್ರಥಮದರ್ಜೆ ಕಾಲೇಜಿನ ಪುನಶ್ಚೇತನಕ್ಕಾಗಿ ೧೬೭ ಲಕ್ಷ, ಮಹಿಳಾ ಕಾಲೇಜಿಗೆ ೨೫೦ ಲಕ್ಷ, ನಗರದ ಬಾಲಕಿಯರ ಜೂನಿಯರ್ ಕಾಲೇಜಿಗೆ ೭೫ ಲಕ್ಷ, ನನ್ನ ಮತ್ತು ಸಂಸದರ ಪ್ರದೇಶಾಭಿವೃದ್ದಿ ನಿಧಿ ೯೪ ಲಕ್ಷದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ನಿರ್ಮಾಣ ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ೧೩.೧೮ ಕೋಟಿ ವೆಚ್ಚದಲ್ಲಿ ೫೦ ಹಾಸಿಗೆಗಳ ಕ್ರಿಟಿಕಲ್ ಕೇರ್ ಯುನಿಟ್ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.