ಕನಸಾಗಿಯೇ ಉಳಿದ ವಯೋವೃದ್ಧರ ಗುಡಿಸಲು ಮುಕ್ತ ಬದುಕು

ಬೀದಿಗೆ ಬಂದ ವಯೋವೃದ್ಧರು ಕಣ್ಮುಚ್ಚಿಕುಳಿತ ಸ್ಥಳೀಯ ಆಡಳಿತ
ಹುಸೇನಪ್ಪ ಗಂಜಳ್ಳಿ
ರಾಯಚೂರು, ಮಾ.೦೬-ಸೂರಿಲ್ಲದೇ ಪರದಾಡುತ್ತಿರುವ ವೃದ್ಧ ದಂಪತಿಗೆ ಬೇಕಿದೆ ಮನೆಯ ಆಸರೆ. ವೃದ್ಧರ ನೆರವಿಗೆ ಸ್ಪಂದಿಸದ ಜನಪ್ರತಿನಿದಿಗಳು, ಶಾಸಕರು ಮತ್ತು ಸ್ಥಳೀಯ ಆಡಳಿತ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ೨೦ ವರ್ಷಗಳಿಂದ ಸೂರಿಲ್ಲದೇ ಹೀನ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ವಯೋವೃದ್ಧ ಯಲ್ಲಪ್ಪ ಮತ್ತು ಮಲ್ಲಮ್ಮ ದಂಪತಿಗಳ ಗೋಳು ಕೇಳೋರು ಯಾರು? ಹೌದು ವಾಸಕ್ಕೆ ನಿವೇಶನವಿಲ್ಲ, ಮನೆಯಿಲ್ಲ. ಆದರೆ ತಾ.ಪಂ, ಜಿ.ಪಂ ಹಾಗೂ ಶಾಸಕ ಆಕಾಂಕ್ಷಿಗಳ ಭರವಸೆಗಳಿಗೆ ಏನು ಕಮ್ಮಿಯಿಲ್ಲ. ಸ್ಥಳೀಯ ಗ್ರಾ.ಪಂ ಹಾಗೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ವೃದ್ಧ ದಂಪತಿ ಸೂರಿಲ್ಲದೆ ಬಿಸಿಲು, ಮಳೆ ಗಾಳಿಯಲ್ಲೇ ದಿನ ಕಳೆಯುತ್ತಿರುವ ಹೃದಯವಿದ್ರಾವಕ ಘಟನೆ ರಾಯಚೂರು ತಾಲೂಕಿನ ದೇವಸ್ಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಂದ್ರನಗರ ಕ್ಯಾಂಪಿನಲ್ಲಿ ಕಾಣಬಹುದಾಗಿದೆ. ಇಳಿ ವಯಸ್ಸಿನಲ್ಲೂ ಸೂರಿಗಾಗಿ ಕಂಡವರನ್ನೆಲ್ಲ ಕೈಮುಗಿದು ಬೇಡುತ್ತಿರುವ ಈ ವೃದ್ಧ ದಂಪತಿಯ ಗೋಳು ನಿಜಕ್ಕೂ ಕರುಣಾಜನಕ.
ಜನಪ್ರತಿನಿಧಿಗಳು ನೀಡಿದ ಎಲ್ಲಾ ಭರವಸೆಗಳು ಹುಸಿಯಾಗಿವೆ. ಅಧಿಕಾರಿಗಳು ಮನೆ ಕೊಡಲು ಅವರಿಗೆ ನಿವೇಶನವೇ ಇಲ್ಲವೆಂದು ಜಾರಿಕೊಳ್ಳುತ್ತಿದ್ದು ವೃದ್ಧ ದಂಪತಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕೆಲ ವರ್ಷಗಳವರೆಗೆ ಗಿಡ ಮರಗಳ ಆಸರೆಯಲ್ಲೇ ದಿನದೂಡುತ್ತಿದ್ದ ವೃದ್ಧ ದಂಪತಿಯ ಕೂಗು ಯಾರಿಗೂ ಕೇಳಿಸಿಲ್ಲ. ನಿತ್ಯ ಕೂಲಿ ನಾಲಿ ಮಾಡಿ ಯಾರ ಆಸರೆಯಿಲ್ಲದೆ ಬದುಕು ಸಾಗಿಸಿರುವ ದಂಪತಿ ಕೆಲ ವರ್ಷಗಳಿಂದ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದರು. ಆದರೆ ಆ ಜಾಗದ ಮಾಲೀಕರು ಜಾಗ ವಾಪಸ್ಸು ಪಡೆದ ಕಾರಣ ವೃದ್ಧ ದಂಪತಿ ಸದ್ಯ ಬೀದಿಯಲ್ಲೇ ವಾಸ ಮಾಡುತ್ತಿದ್ದಾರೆ.
ಅರ್ಹರಿಗೆ ತಲುಪಬೇಕಾದ ವಸತಿ ಯೋಜನೆ ಉದ್ದೇಶ ಬುಡಮೇಲು ಆಗುತ್ತಿದೆ. ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ದೊರೆತೆಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ.
ವೃದ್ಧ ದಂಪತಿಗೆ ಸುರಕ್ಷಿತ ಮನೆಯಿಲ್ಲ. ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸುವ ಹಕ್ಕಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲಾ ಸೌಲಭ್ಯ ಸಿಗಬೇಕು. ವಸತಿ ಯೋಜನೆಗಳ ದೊಡ್ಡ ಪಟ್ಟಿಯೇ ಇದ್ದರೂ ಇವೆಲ್ಲ ಯಾರ
ಮಡಲಿಗೆ ಸೇರುತ್ತಿದೆ ಎಂಬುದು ಪ್ರೆಶ್ನೆ?. ಅರ್ಹರಿಗೆ ಸಿಗಬೇಕಾದ ವಸತಿ ಯೋಜನೆ ಅಧಿಕಾರಿ ಮತ್ತು ಜನಪ್ರತಿನಿದಿನ ನಿರ್ಲಕ್ಷದಿಂದ ಸಿಗುತ್ತಿಲ್ಲ ಎಂಬುವುದಕ್ಕೆ ಈ ವೃದ್ಧ ದಂಪತಿಯೇ ಸಾಕ್ಷಿ!.
ಈ ದಂಪತಿಗಳಿಗೆ ಸೂರು ಇಲ್ಲದ ಬಗ್ಗೆ ಈಗಾಗಲೇ ಸಂಜೆವಾಣಿ ಪತ್ರಿಕೆಯಲ್ಲಿ ವರದಿ ಮಾಡಿ ಪಂಚಾಯಿತಿಯ ಗಮನಕ್ಕೆ ತರಲಾಗಿದೆ. ಗ್ರಾಮ ಪಂಚಾಯ್ತಿತಿ ಪಿಡಿಒಗಳ ಗಮನಕ್ಕೆ ಇದ್ದರೂ ಪ್ರಯೋಜನವಾಗಿಲ್ಲ.
ಜಿಲ್ಲಾಡಳಿತಕ್ಕೆ ಸಂಘಟನೆ ಮುಖಂಡರಿಂದ ಮನವಿ ಸಲ್ಲಿಸಿದರು ವೃದ್ಧರಿಗೆ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿಲ್ಲ ಬದಲಾಗಿ ಕೇವಲ ಭರವಸೆಗೆ ಸೀಮಿತಗವಾಗಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವೃದ್ಧ ದಂಪತಿಗೆ ಕನಸಿನ ಮನೆ ಕನಸಾಗಿಯೇ ಉಳಿದಿದೆ. ಸರ್ಕಾರ ಇವರ ಪಾಲಿಗೆ ಸತ್ತಂತಾಗಿದೆ ಹಾಗೂ ಭರವಸೆ ಹುಸಿಯಾದ ಕಾರಣ ಇವರಿಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲದಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದ ಗುಡಿಸಲು ಮುಕ್ತ ಗ್ರಾಮ, ಗುಡಿಸಲು ಮುಕ್ತ ರಾಜ್ಯ ಆಗುವುದು ಯಾವಾಗ. ಯೋಜನೆಗಳು ಸರ್ಕಾರದ ಕಡತಗಳಿಗೆ ಸೀಮಿತವಾಗಿದೆ. ಕೋಟ್ಯಾಂತರ ರೂಪಾಯಿ ಅನುದಾನ ಈ ಯೋಜನೆಗಳಿಗೆ ಬಿಡುಗಡೆಯಾದರೂ ಸೋರಿಕೆಯಾಗುತ್ತಿರುವುದು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ.
ಈ ವೃದ್ಧ ದಂಪತಿಗಳ ಪರಿಸ್ಥಿತಿ ಕಂಡು ಅನೇಕರು ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಸೂರು ಕಲ್ಪಿಸಿ ಅವರಿಗೆ ಅಸರೆಯಾಗಬೇಕಿದೆ.

ನಿರ್ಗತಿಕ ವೃದ್ಧ ದಂಪತಿಗೆ ಸರಕಾರಿ ಜಾಗ ಲಭ್ಯವಿದಲ್ಲಿ ಸ್ಥಳೀಯ ಪಂಚಾಯತ್ ಮೂಲಕ ತಾತ್ಕಾಲಿಕ ಶೆಡ್ ನಿರ್ಮಿಸಿ. ವಸತಿ ಯೋಜನೆ ನಿಯಮನುಸಾರ ಹಕ್ಕುಪತ್ರ ವಿತರಿಸಿ ಮನೆ ಮಂಜೂರು ಮಾಡಲಾಗುವುದು.
-ರಾಮರೆಡ್ಡಿ
ಇಒ ತಾಲೂಕು ಪಂಚಾಯತ್, ರಾಯಚೂರು

ನಿರ್ಗತಿಕರ ವೃದ್ಧ ದಂಪತಿಗೆ ಮನೆ ನಿರ್ಮಿಸುವಂತೆ
ಗ್ರಾಂ, ತಾ. ಪಂ ಮತ್ತು ಜಿಲ್ಲಾಡಳಿತ ಗಮನಕ್ಕೆ ತಂದರೂ ಅಧಿಕಾರಿಗಳು ಮೌನವಹಿಸಿದ್ದು ಸರಿಯಲ್ಲ. ಶೀಘ್ರದಲ್ಲಿ ವೃದ್ಧರ ನೆರವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.
-ನರಸಿಂಹಲು
ಎಂಆರ್‌ಹೆಚ್‌ಎಸ್ ಹೋರಾಟಗಾರ.