ಕನಕಪುರದಲ್ಲಿ ಅಶೋಕ್ ಪರ ಪ್ರಚಾರಕ್ಕೆ ಅಡ್ಡಿ

ಕನಕಪುರ,ಮೇ.೭- ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರವಾಗಿ ಚುನಾವಣೆ ಪ್ರಚಾರ ಮಾಡಲು ಬಂದಂತಹ ಮಹಿಳಾ ಕಾರ್ಯಕರ್ತರನ್ನು ಡಿಕೆಶಿ ಪಟಾಲಂ ಅವಕಾಶ ನೀಡದೆ ಅಡ್ಡಿ ಪಡಿಸಿ ದೌರ್ಜನ್ಯವೆಸಗಿ ಧಮ್ಕಿ ಹಾಕಿದ್ದಾರೆ. ನಾವು ಯಾವ ವ್ಯವಸ್ಥೆಯಲ್ಲಿ ಇದ್ದೇವೆ, ಇದು ಶಿವಕುಮಾರ್ ಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಆರೋಪಿಸಿದರು.
ತಾಲ್ಲೂಕಿನ ತುಂಗಣಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಲು ಬಂದ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರಿಗೆ ಪ್ರಚಾರ ನಡೆಸದೆ ಅಡ್ಡಿ ಪಡಿಸಿರುವುದನ್ನು ವಿರೋಧಿಸಿ ಕನಕಪುರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವುದಕ್ಕೆ ಅಡ್ಡಿಪಡಿಸಬಹುದೆ ಎಂಬುದು ಗೊತ್ತಿಲ್ಲವೇ, ಅಥವಾ ಗೊತ್ತಿದ್ದು ಅವರು ಆಜ್ಞೆಯಂತೆ ಅವರ ಪಟಾಲಂ ಈ ರೀತಿ ದುಂಡಾವರ್ತನೆ ತೋರಿದ್ದಾರೆ.
ಇಂತಹ ಆಟಗಳಿಗೆ ನಾವು ಹೆದರುವುದಿಲ್ಲ. ಬೇರೆ ಪಕ್ಷದವರು ಇಲ್ಲಿ ಪ್ರಚಾರ ಮಾಡಬಾರದೆಂದರೆ ಹೇಗೆ, ಇವರ ದೌರ್ಜನ್ಯ ದಬ್ಬಾಳಿಕಗೆ ಕ್ಷೇತ್ರದ ಮತದಾರರು ಮೇ ೧೦ ರಂದು ಮತದಾನದ ಮೂಲಕ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು.
ಪ್ರಚಾರಕ್ಕೆ ಅಡ್ಡಿ ಪಡಿಸಿ ದೌರ್ಜನ್ಯ ನಡೆಸಿ ಧಮ್ಕಿ ನಡೆಸಿರುವ ಸಂಬಂಧ ಈಗಾಗಲೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕನಕಪುರ ಕ್ಷೇತ್ರದ ಬಿಜೆಪಿ ಉಸ್ತುವಾರಿ ಅಜಾದ್‌ಸಿಂಗ್, ನಗರ ಘಟಕದ ಅಧ್ಯಕ್ಷ ಮುತ್ತಣ್ಣ, ಮಾದ್ಯಮ ವಕ್ತಾರ ಮದನ್ ಮತ್ತಿತರರು ಉಪಸ್ಥಿತರಿದ್ದರು.