ಕನಕದಾಸ ಓಬವ್ವ ಜಂಟಿಯಾಗಿ ಜಯಂತಿ ಆಚರಣೆ

ದೇವದುರ್ಗ.ನ.೮- ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಭಕ್ತ ಕನಕದಾಸರು ಹಾಗೂ ವೀರ ವನಿತೆ ಓನಕೆ ಓಬವ್ವ ಜಯಂತಿ ನ.೧೧ರಂದು ಜಂಟಿಯಾಗಿ ಆಚರಣೆ ಮಾಡಬೇಕು. ಇದಕ್ಕೆ ತಾಲೂಕು ಕುರುಬರ ಸಮಾಜ ಹಾಗೂ ಛಲವಾದಿ ಸಮಾಜ ಸಹಕಾರ ನೀಡಲಿದೆ ಎಂದು ಮುಖಂಡರಾದ ಸಿದ್ದಯ್ಯ ತಾತ ಗುರುವಿನ ಗಬ್ಬೂರು ಹಾಗೂ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ತಮ್ಮಣ್ಣ ವಕೀಲ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಂಗಳವಾರ ಮಾತನಾಡಿದರು. ಇಬ್ಬರು ಮಹಾನಿಯರ ಜಯಂತಿ ಒಂದೇ ದಿನ ಬಂದಿರುವ ಕಾರಣ ತಾಲೂಕು ಆಡಳಿತ ಬೇರೆ ಬೇರೆ ಜಯಂತಿ ಆಚರಣೆ ಮಾಡಲು ಮುಂದಾಗಿತ್ತು. ಹೀಗಾಗಿ ನಾವು ಸಭೆ ಸೇರಿ ಇಬ್ಬರು ಮಹಾನಿಯರ ಜಯಂತಿ ಜಂಟಿಯಾಗಿ ಆಚರಣೆ ಮಾಡಲು ತೀರ್ಮಾನ ಕೈಗೊಂಡಿದ್ದೇವೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದು, ಎರಡು ಸಮಾಜದಿಂದ ಅದ್ದೂರಿಯಾಗಿ ಜಯಂತಿ ಆಚರಿಸಲಾಗುವುದು.
ತಾಲೂಕು ಆಡಳಿತದ ನಿರ್ದೇಶನದಂತೆ ಬೆಳಗ್ಗೆ ಇಬ್ಬರು ಮಹಾನ್ ವ್ಯಕ್ತಿಗಳ ಭಾವಚಿತ್ರವನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಬಡಾವಣೆ ಮೂಲಕ ಮೆರವಣಿಗೆ ನಡೆಸಲಾಗುವುದು. ನಂತರ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಎರಡೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಪ್ಪ, ನಾಗರಾಜ ಖಾನಾಪುರ, ಮಹಾಂತೇಶ ಭವಾನಿ ಇತರರಿದ್ದರು.