ಕನಕದಾಸರ ಸಂದೇಶಗಳು, ಕೀರ್ತನೆಗಳು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿವೆ

ಅಥಣಿ : ನ.23:ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯ ಮೂಲಕ ಪ್ರಸಿದ್ಧರಾದವರು ಕನಕದಾಸರು. ಅವರು ಕನ್ನಡ ಭಾಷೆಯಲ್ಲಿ ನಾಡಿನಾದ್ಯಂತ ಕೀರ್ತನೆಗಳನ್ನು ನಡೆಸುವ ಮೂಲಕ ಜನರಲ್ಲಿನ ಮೌಲ್ಯವನ್ನು ದೂರು ಮಾಡಿದವರು. ಅವರ ಜಯಂತಿ ಒಂದು ಸಮಾಜಕ್ಕೆ ಸೀಮಿತವಾಗಬಾರದು, ಇಡೀ ಮನುಕುಲದ ಒಳಿತಿಗಾಗಿ ಪ್ರಸಿದ್ಧ ಕೀರ್ತನೆಗಳನ್ನು ನೀಡಿದವ ದಾಸ ಸಾಹಿತ್ಯ ಎಲ್ಲ ಧರ್ಮ ವರ್ಗದವರಿಗೂ ದಾರಿದೀಪವಾಗಿವೆ ಎಂದು ಪುರಸಭೆ ಮಾಜಿ ಸದಸ್ಯ ನಟರಾಜ ಹಿರೇಮಠ್ ಹೇಳಿದರು.
ಅವರು ಕನಕನಗರದಲ್ಲಿ ಕನಕದಾಸ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನಕದಾಸರ ಭಕ್ತಿ ಮತ್ತು ಶಕ್ತಿ ದೊಡ್ಡದು, ಅವರ ಭಕ್ತಿಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ದರ್ಶನ ನೀಡುವ ಮೂಲಕ ಪವಾಡ ಮಾಡಿದ್ದಾರೆ. ಅವರ ಭಕ್ತಿ, ಕವಿತ್ವ, ಸಂಗೀತದಲ್ಲಿನ ಸಾಧನೆಗೆ ಯಾವುದೇ ಜಾತಿ ಧರ್ಮಗಳು ಅಡ್ಡಿಯಾಗಲಾರದು ಎಂಬುದಕ್ಕೆ ದಾಸಶ್ರೇಷ್ಠ ಕನಕದಾಸರ ಜೀವನವೇ ಸಾಕ್ಷಿ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲೂಕ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ 16ನೇ ಶತಮಾನದಲ್ಲಿ ತಮ್ಮ ದಾಸಸಾಹಿತ್ಯದ ಮೂಲಕ ಕನ್ನಡ ನಾಡಿಗೆ ವಿಶೇಷ ಕೊಡುಗೆ ನೀಡಿದ ದಾಸ ಪರಂಪರೆಯಲ್ಲಿ ಪುರಂದರದಾಸರು ಮತ್ತು ಕನಕದಾಸರು. ಸಮಾನತೆಯ ಸಂದೇಶ ಮತ್ತು ಮೂಢನಂಬಿಕೆಗಳ ವಿರುದ್ಧ ಕನ್ನಡಲ್ಲಿ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿ ಪ್ರಸಿದ್ಧರಾದವರು. ಅವರ ಜಯಂತಿಯನ್ನು ಒಂದು ಜನಾಂಗದವರು ಮಾತ್ರ ಮಾಡದೆ, ಎಲ್ಲ ವರ್ಗದವರು ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರು ನೀಡಿದ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜ ಸೇವಕ ಪರಶುರಾಮ ಚುಬಚಿ ಮಾತನಾಡಿ ಶ್ರೇಷ್ಠ ಸಂತ ಕನಕದಾಸರು ನೀಡಿದ ಸಂದೇಶಗಳು, ಕೀರ್ತನೆಗಳು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿವೆ. ಅವರ ಜಯಂತಿಯ ಮೂಲಕ ಮುಂದಿನ ಯುವ ಪೀಳಿಗೆಗೆ ಅವರ ಆದರ್ಶಗಳನ್ನು ತಿಳಿಸಿಕೊಡುವುದು ಅಗತ್ಯವಿದೆ ಎಂದು ಹೇಳಿದರು.

ಈ ವೇಳೆ ಎಂಎಚ್ ಇನಾಮದಾರ, ಸಂಜಯ್ ದನಗೊಂಡ, ಅಮಿತ್ ಡವಳೇಶ್ವರ, ಉದಯ ಮಕಾಣಿ, ಡಾ. ವಡಗಲಿ, ರಾಮಚಂದ್ರ ದೊಡ್ಡಮನಿ, ಎಸ್ ಬಿ ದೊಡ್ಡಮನಿ, ಜ್ಯೋತೆಪ್ಪ ಲಂಗೋಟಿ ಇನ್ನಿತರರು ಉಪಸ್ಥಿತರಿದ್ದರು. ಉದಯ ಮಾಕಾಣಿ ಸ್ವಾಗತಿಸಿ ವಂದಿಸಿದರು.